ಸರ್ಕಾರಿ ಗೌರವದೊಂದಿಗೆ ಇಂದು ಪಾಸ್ವಾನ್‌ ಅಂತ್ಯಕ್ರಿಯೆ| ರಾಷ್ಟ್ರಪತಿ, ಮೋದಿ ಅಂತಿಮ ದರ್ಶನ| ಪಾಸ್ವಾನ್‌ ಖಾತೆ ಹೊಣೆ ಪೀಯೂಷ್‌ಗೆ

ನವದೆಹಲಿ(ಅ.10): ರಾಜಧಾನಿಯ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಅವರ ಅಂತಿಮ ದರ್ಶನವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಕ್ರವಾರ ಪಡೆದರು. ಇದೇ ವೇಳೆ ಕೇಂದ್ರ ಸಂಪುಟ ಸಭೆಯಲ್ಲಿ 2 ನಿಮಿಷ ಮೌನಾಚರಣೆ ಮಾಡಿ ಪಾಸ್ವಾನ್‌ ಅವರಿಗೆ ಗೌರವ ಸಲ್ಲಿಸಲಾಯಿತು.

ಶನಿವಾರ ಬಿಹಾರದ ಪಟನಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾಸ್ವಾನ್‌ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಭಾಗಿಯಾಗಲಿದ್ದಾರೆ. ಈ ನಡುವೆ, ಪಾಸ್ವಾನ್‌ ನಿರ್ವಹಿಸುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ವಹಿಸಲಾಗಿದೆ.

ಪ್ರಧಾನಿ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ಕೋವಿಂದ್‌ ಅವರು ಗೋಯಲ್‌ ಅವರಿಗೆ ಈ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಕೇಂದ್ರ ಆಹಾರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ ಸಂಸ್ಥಾಪಕ ರಾಮವಿಲಾಸ್‌ ಪಾಸ್ವಾನ್‌ (74) ಅವರು ಗುರುವಾರ ನಿಧನರಾಗಿದ್ದು, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದಷ್ಟೇ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪಾಸ್ವಾನ್‌ ಈವರೆಗೆ 8 ಬಾರಿ ಲೋಕಸಭೆ ಹಾಗೂ ಒಮ್ಮೆ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಸಿದ್ದಾರೆ.