ಪಾಟ್ನಾ(ನ.26):  ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋತಿರುವ ಆರ್ಜೆಡಿ ಈಗ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ತೇಜಸ್ವಿ ಯಾದವ್ಕ ಅವರನ್ನು ಮುಖ್ಯಮಂತ್ರಿ ಮಾಡಲು ಸಂಚು ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. 

ಮೇವು ಹಗರಣದಲ್ಲಿ ಶಿಕ್ಷೆಗೆ ಒಳಪಟ್ಟು ಜೈಲು ಪಾಲಾಗಿ ಈಗ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ನಿತೀಶ್ ಸರ್ಕಾರವನಮ್ನು ಬೀಳಿಸಲು ಎನ್‌ಡಿಎ ಶಾಸಕರಿಗೆ ಫೋನ್ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡ ಸುಶೀಲ್ ಮೋದಿ ಆರೋಪಿಸಿದ್ದಾರೆ. 

ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಲಲನ್ ಕುಮಾರ್ ಜೊತೆ ಲಾಲು ಮಾತನಾಡಿದ್ದಾರೆ ಎನ್ನಲಾದ ಫೋನ್ ಸಂಭಾಷಣೆ ಆಡಿಯೋ ತಮ್ಮ ಟ್ವಿಟರ್ ಖಾತೆಯಲ್ಲಿ ಸುಶೀಲ್ ಮೋದಿ ಬಹಿರಂಗಪಡಿಸಿದ್ದಾರೆ. ಹೀಗಿರುವಾಗಲೇ ಆ ಆಡಿಯೋ ನಿಜವೆಂದು ಲಲನ್ ಹೇಳಿದ್ದು, ಸುಶೀಲ್ ಸಮ್ಮುಖದಲ್ಲೇ ನನಗೆ ಲಾಲು ಫೋನ್ ಬಂತು. ಅದನ್ನು ತಿಳಿಯದೆ ಲಾಲು ನನಗೆ ಆಮಿಷ ಒಡ್ಡಿದರು ಎಂದಿದ್ದಾರೆ.