ಜೈಲು ಶಿಕ್ಷೆ ಮಧ್ಯೆಯೇ ಅಭ್ಯರ್ಥಿಗಳಿಗೆ ಲಾಲು ಸಂದರ್ಶನ!
ಆಸ್ಪತ್ರೆಯಲ್ಲಿರುವ ಅತಿ ಸುದೀರ್ಘಾವಧಿ ಅಪರಾಧಿ ಎಂಬ ‘ಕೀರ್ತಿ’ಗೂ ಭಾಜನರಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರು ಶಿಕ್ಷೆ ಅನುಭವಿಸುತ್ತಿರುವ ವೇಳೆಯೇ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಸಂದರ್ಶನ ಆರಂಭಿಸಿದ್ದಾರೆ!
ರಾಂಚಿ/ಪಟನಾ(ಅ.09): ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರು ಶಿಕ್ಷೆ ಅನುಭವಿಸುತ್ತಿರುವ ವೇಳೆಯೇ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಸಂದರ್ಶನ ಆರಂಭಿಸಿದ್ದಾರೆ!
ಅಚ್ಚರಿ ಎನ್ನಿಸಿದರೂ ಹೌದು. ರಾಂಚಿ ಜೈಲಿನಲ್ಲಿ ಲಾಲುರನ್ನು ಇರಿಸಲಾಗಿತ್ತಾದರೂ, ಅನಾರೋಗ್ಯದ ಕಾರಣ ನೀಡಿ ಅವರು 2018ರ ಆ.29ರಂದೇ ರಾಂಚಿಯ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಈ ಮೂಲಕ ಆಸ್ಪತ್ರೆಯಲ್ಲಿರುವ ಅತಿ ಸುದೀರ್ಘಾವಧಿ ಅಪರಾಧಿ ಎಂಬ ‘ಕೀರ್ತಿ’ಗೂ ಭಾಜನರಾಗಿದ್ದಾರೆ. ಇನ್ನು ಕಳೆದ ಆಗಸ್ಟ್ 5ರಂದು ಅವರು ಆಸ್ಪತ್ರೆಯ ಡೈರೆಕ್ಟರ್ಸ್ ಬಂಗಲೆಗೆ ಸ್ಥಳಾಂತರಗೊಂಡು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಸೇನೆ ಸರ್ಕಾರ ಕೆಳಗಿಳಿಸ್ತೀವಿ, ಮಹಾರಾಷ್ಟ್ರದಲ್ಲಿ ಶೀಘ್ರ ಬಿಜೆಪಿ ಸರ್ಕಾರ ರಚನೆ: ನಡ್ಡಾ
ಆದರೆ ಇದೇ ಅವಕಾಶವನ್ನು ‘ದುರ್ಬಳಕೆ’ ಮಾಡಿಕೊಳ್ಳುತ್ತಿರುವ ಅವರು, ಅಲ್ಲಿಂದಲೇ ಆರ್ಜೆಡಿ ಟಿಕೆಟ್ ಆಕಾಂಕ್ಷಿಗಳನ್ನು ಕರೆಸಿಕೊಂಡು ಸಂದರ್ಶನ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನು ಲಾಲು ಆಪ್ತರೊಬ್ಬರು ಖಚಿತಪಡಿಸಿದ್ದಾರೆ. ‘ಡೈರೆಕ್ಟರ್ಸ್ ಬಂಗಲೆಗೆ ತಮಗೆ ಬೇಕಾದ ಟಿಕೆಟ್ ಆಕಾಂಕ್ಷಿಗಳನ್ನು ಲಾಲು ಕರೆಸಿಕೊಳ್ಳುತ್ತಿದ್ದಾರೆ. ಅವರಿಗೆ ಲಾಲು ಟಿಕೆಟ್ ಆಶ್ವಾಸನೆ ನೀಡುತ್ತಿದ್ದಾರೆ. ಲಾಲು ಅವರೇ ಟಿಕೆಟ್ ಫೈನಲ್ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ನಿತ್ಯ ಲಾಲು ಅವರಿಗೆ ಸುಮಾರು 5000 ಬಯೋಡೇಟಾಗಳು ತಲುಪುತ್ತಿವೆ. ಲಾಲು ಅವರು ಮೊಬೈಲ್ನಲ್ಲೂ ಚುನಾವಣಾ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದೂ ತಿಳಿದುಬಂದಿದೆ.
ದೇವೇಂದ್ರ ಫಡ್ನವೀಸ್ ಜತೆ ಜಾರಕಿಹೊಳಿ: ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ
‘ಅಪರಾಧಿಗಳಿಗೆ ಈ ರೀತಿ ಮುಕ್ತವಾಗಿ ಬೇಕಾದವರನ್ನು ಭೇಟಿ ಮಾಡಲು ಆಗದು. ಅದ್ಹೇಗೆ ಎಲ್ಲರಿಗೂ ಭೇಟಿಗೆ ಅವಕಾಶ ನೀಡಲಾಗುತ್ತಿದೆ ಎಂಬುದೇ ಪ್ರಶ್ನೆ. ಇದು ರಾಜ್ಯದ ಜೆಎಂಎಂ-ಕಾಂಗ್ರೆಸ್ ಸರ್ಕಾರದ ವೈಫಲ್ಯ’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ರಘುಬರ ದಾಸ್ ಆರೋಪಿಸಿದ್ದಾರೆ. ಅಲ್ಲದೆ, ಲಾಲುಗೆ ಮೊಬೈಲ್ ಹೇಗೆ ನೀಡಲಾಗಿದೆ ಎಂಬುದೂ ಪ್ರಶ್ನೆಯಾಗಿದೆ.