ಮೆಟ್ಟಿಲಿನಿಂದ ಜಾರಿ ಬಿದ್ದು ಲಾಲು ಭುಜದ ಮೂಳೆ ಮುರಿತ

* ಬಿಹಾರ ಮಾಜಿ ಸಿಎಂಗೆ ಅಪಘಾತ

* ಮೆಟ್ಟಿಲಿನಿಂದ ಜಾರಿ ಬಿದ್ದು ಲಾಲು ಭುಜದ ಮೂಳೆ ಮುರಿತ

* ಕೆಲ ಔಷಧಿಗಳನ್ನು ತೆಗೆದುಕೊಳ್ಳಲು ತಿಳಿಸಿ ಲಾಲು ಅವರನ್ನು ಮನೆಗೆ ಕಳುಹಿಸಿದ ವೈದ್ಯರು

Lalu Prasad Yadav falls from stairs fractures shoulder pod

ಪಟನಾ(ಜು.04): ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ತಮ್ಮ ಮನೆಯಲ್ಲೇ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದು, ಅವರ ಭುಜದ ಮೂಳೆ ಮುರಿದಿದೆ ಹಾಗೂ ಬೆನ್ನಿಗೆ ಪೆಟ್ಟಾಗಿದೆ ಎಂದು ಕುಟುಂಬಸ್ಥರು ಭಾನುವಾರ ಹೇಳಿದ್ದಾರೆ.

‘ಮೆಟ್ಟಿಲಿನಿಂದ ಜಾರಿ ಬಿದ್ದ ಲಾಲು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಭುಜದ ಮೂಳೆ ಮುರಿದಿದೆ ಎಂದು ಹೇಳಿದ್ದಾರೆ. ಈ ಭಾಗಕ್ಕೆ ಪಟ್ಟಿಮಾಡಲಾಗಿದ್ದು, ಕೆಲ ಔಷಧಿಗಳನ್ನು ತೆಗೆದುಕೊಳ್ಳಲು ತಿಳಿಸಿ ಲಾಲು ಅವರನ್ನು ಮನೆಗೆ ಕಳುಹಿಸಿದ್ದಾರೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಲಾಲು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ತಮ್ಮ ಕಿಡ್ನಿ ತೊಂದರೆಯ ಚಿಕಿತ್ಸೆಗಾಗಿ ಶೀಘ್ರವೇ ವಿದೇಶಕ್ಕೆ ತೆರಳಲು ನಿರ್ಧರಿಸಿದ್ದರು ಎನ್ನಲಾಗಿದೆ.

14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲಾಲುಗೆ ಸಂಕಷ್ಟ

ಮೇವು ಹಗರಣದಲ್ಲಿ ಇತ್ತೀಚಿಗಷ್ಟೇ ಜಾಮೀನು ಪಡೆದಿದ್ದ ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಹೊಸ ಸಂಕಷ್ಟಎದುರಾಗಿದೆ. ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಸಿಬಿಐ ಲಾಲು ವಿರುದ್ಧ ಹೊಸ ಎಫ್‌ಐಆರ್‌ ದಾಖಲಿಸಿದೆ. ಇದರಲ್ಲಿ ಲಾಲು ಸೇರಿದಂತೆ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಸಹ ಹೆಸರಿಸಲಾಗಿದೆ.

2004-09ರಲ್ಲಿ ರೈಲ್ವೇ ಸಚಿವರಾಗಿದ್ದ ಸಮಯದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಭೂಮಿ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿ, ಪಟನಾ ಮತ್ತು ಗೋಪಾಲ್‌ಗಂಜ್‌ನಲ್ಲಿ ಲಾಲು ಅವರಿಗೆ ಸೇರಿದ ಸುಮಾರು 16ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಮುಂಬೈ, ಜಬ್ಬಲ್‌ಪುರ, ಜೈಪುರ, ಹಾಜಿಪುರ ರೈಲ್ವೇ ವಲಯಗಳಲ್ಲಿ 12 ಮಂದಿಗೆ ಗ್ರೂಪ್‌ ಡಿ ಉದ್ಯೋಗ ನೀಡಲು ಭ್ರಷ್ಟಾಚಾರ ಎಸಗಲಾಗಿದೆ. ಈ ಪ್ರಕರಣದಲ್ಲಿ ಲಾಲು ಅವರ ಪತ್ನಿ ರಾಬ್ಡಿ ದೇವಿ ಮತ್ತು ಪುತ್ರಿಯರಾದ ಮಿಸಾ ಭಾರ್ತಿ ಮತ್ತು ಹೇಮಾ ಯಾದವ್‌ ಅವರನ್ನೂ ಸಿಬಿಐ ಹೆಸರಿಸಿದೆ.

ರಾಬ್ಡಿದೇವಿ ಮತ್ತು ಮಿಸಾ ಭಾರ್ತಿ ಅವರ ಹೆಸರಿನಲ್ಲಿ ಕ್ರಯ ಪತ್ರ ಮಾಡಲಾಗಿದೆ. ಹೇಮಾ ಯಾದವ್‌ ಅವರ ಹೆಸರಿನಲ್ಲಿ ಉಡುಗೊರೆ ಪತ್ರ ನೀಡಲಾಗಿದೆ ಎಂದು ಸಿಬಿಐ ಹೇಳಿದೆ. ಈ ಭೂಮಿಗಾಗಿ ಲಾಲು ಅವರ ಕುಟುಂಬ 3.75 ಲಕ್ಷದಿಂದ 13 ಲಕ್ಷದವರೆಗೆ ಪಾವತಿಸಿದ್ದಾರೆ. ಆದರೆ ಇವುಗಳ ಮೌಲ್ಯ 5 ಕೋಟಿಯಷ್ಟಿತ್ತು ಎಂದು ಸಿಬಿಐ ಆರೋಪಿಸಿದೆ.
 

 

Latest Videos
Follow Us:
Download App:
  • android
  • ios