Baba Hariharnath Mandir:ಶಿವಲಿಂಗದ ಮೇಲೆ ಕೈತೊಳೆದ ಲಾಲೂ ಪ್ರಸಾದ್, ರಾಬ್ಡಿ ದೇವಿ!
ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ಡಿ ದೇವಿ ಇತ್ತೀಚೆಗೆ ಬಿಹಾರದ ಬಾಬಾ ಹರಿನಾಥ್ ಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿದ್ದ ದಂಪತಿಗಳು ಬಳಿಕ ಶಿವಲಿಂಗದ ಮೇಲೆಯೇ ಕೈತೊಳೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ನವದೆಹಲಿ (ಸೆ.4): ಆರ್‌ಜೆಡಿ ಸುಪ್ರೀಮೋ ಹಾಗೂ ಇಂಡಿ ಒಕ್ಕೂಟದ ಪ್ರಮುಖ ನಾಯಕ ಲಾಲೂ ಪ್ರಸಾದ್ ಯಾದವ್ ಇತ್ತೀಚೆಗೇ ದೇವಸ್ಥಾನಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಗೋಪಾಲ್‌ಗಂಜ್‌ನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಲಾಲೂ ಪ್ರಸಾದ್ ಯಾದವ್ ಅಲ್ಲಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ಅವರ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕೂಡ ಜೊತೆಯಲ್ಲಿದ್ದರು. ಇದರ ನಡುವೆ ಸೋಮವಾರ ಬಿಹಾರದ ಹಾಜಿಪುರದಲ್ಲಿನ ಬಾಬಾ ಹರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ ಲಾಲೂ ಪ್ರಸಾದ್ ಜಲಾಭಿಷೇಕ, ರುದ್ರಾಭಿಷೇಕ ನಡೆಸಿ ದೇಶ ಹಾಗೂ ರಾಜ್ಯ ಅಭಿವೃದ್ಧಿಯನ್ನು ಬೇಡಿಕೊಂಡಿದ್ದಾರೆ. ಈ ನಡುವೆ ಶಿವಲಿಂಗದ ಮೇಲೆಯೇ ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ಡಿ ದೇವಿ ಕೈತೊಳೆದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಲಾಲು-ರಾಬ್ರಿ ದೇವಸ್ಥಾನದ ಆವರಣಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಂತೆಯೇ ಹಲವು ಘೋಷಣೆಗಳು ಮೊಳಗಿದವು. ಬಿಗಿ ಭದ್ರತೆಯ ನಡುವೆ ಅರ್ಚಕರು ಮಂತ್ರ ಪಠಣದೊಂದಿಗೆ ಲಾಲು ಮತ್ತು ರಾಬ್ರಿ ಅವರೊಂದಿಗೆ ಪೂಜೆ ಸಲ್ಲಿಸಿದರು. ಲಾಲು-ರಾಬ್ರಿ ಬಾಬಾ ಅವರು ಹರಿಹರನಾಥ ದೇವಸ್ಥಾನದಲ್ಲಿ ಪುಷ್ಪಗಳನ್ನು ಅರ್ಪಿಸಿ ಜಲಾಭಿಷೇಕ ಮಾಡಿದರು. ಈ ವೇಳೆ ಲಾಲು ದರ್ಶನ ಪಡೆಯಲು ದೇವಸ್ಥಾನದ ಹೊರಗೆ ಜನಸಾಗರವೇ ನೆರೆದಿತ್ತು.
ಶಿವಲಿಂಗದ ಮೇಲೆ ಹಾಲು ತುಪ್ಪಗಳನ್ನು ಹಾಕಿ ರುದ್ರಾಭಿಷೇಕ ಮಾಡಿದ ಲಾಲೂ ರಾಬ್ರಿ ದಂಪತಿ ಅದರ ಬೆನ್ನಲ್ಲಿಯೇ ಶಿವಲಿಂಗದ ಮೇಲೆಯೇ ತಮ್ಮ ಕೈಗಳನ್ನು ಇರಿಸಿಕೊಂಡು ತೊಳೆದುಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಇನ್ನೂ ಕೆಲವರು ಯೋಗಿ ಆದಿತ್ಯನಾಥ್ ಅವರ ಇದೇ ರೀತಿಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಯೋಗಿ ಮಾಡಿದ್ದೂ ಕೂಡ ತಪ್ಪು ಎಂದು ಹೇಳಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್, ಅಭಿಷೇಕ ಮಾಡಿದ ಬಳಿಕ ಶಿವಲಿಂಗದ ಎದುರು ನೀರು ಹರಿಯುವ ಕೊಳ್ಳದಲ್ಲಿ ಕೈತೊಳೆದುಕೊಂಡಿದ್ದಾರೆ. ಆದರೆ, ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಮಾತ್ರ ನೇರವಾಗಿ ಶಿವಲಿಂಗದ ಮೇಲೆಯೇ ಕೈತೊಳೆದುಕೊಂಡಿದ್ದಾರೆ.
'ಇಸ್ರೋ ವಿಜ್ಞಾನಿಗಳು ಮೋದಿಯನ್ನು ಸೂರ್ಯನತ್ತ ಕಳಿಸಬೇಕು' ಇಂಡಿ ಒಕ್ಕೂಟದ ಸಭೆ ಬಳಿಕ ಲಾಲೂ ಪ್ರಸಾದ್ ಹೇಳಿಕೆ!
ರಾಬ್ಡಿ ದೇವಿಯ ಚಪ್ಪಲಿ ಹಿಡಿದುಕೊಂಡಿದ್ದ ಪೊಲೀಸ್ ಅಧಿಕಾರಿ: ಇದರ ನಡುವೆ ಮತ್ತೊಂದು ದೃಶ್ಯ ಚರ್ಚೆಯಾಗುತ್ತಿದೆ. ಈ ಪೂಜೆಯ ವೇಳೆ ಮಹಿಳಾ ಪೋಲೀಸರು ರಾಬ್ಡಿ ದೇವಿ ಅವರ ಚಪ್ಪಲಿ ಹಿಡಿದುಕೊಂಡಿರುವ ವಿಡಿಯೋವೊಂದು ಹೊರಬಿದ್ದಿದೆ. ಈ ಮಹಿಳಾ ಪೋಲೀಸ್ ಕೂಡ ಚಪ್ಪಲಿ ಹಿಡಿದು ದೇವಸ್ಥಾನದ ಒಳಗೆ ಬಂದಿದ್ದರು. ಅವರು ರಾಬ್ರಿ-ಲಾಲು ಅವರ ಭದ್ರತಾ ತಂಡದಲ್ಲಿದ್ದರು ಎಂದು ಹೇಳಲಾಗಿದೆ. ಈ ಚಪ್ಪಲಿಗಳು ರಾಬ್ರಿ ದೇವಿಯದ್ದಾಗಿರಬೇಕು. ಮಹಿಳಾ ಪೊಲೀಸರು ಶೂ ಧರಿಸಿ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಬರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ, ಯಾರ ಚಪ್ಪಲಿ ಯಾರಿಗೆ ಸೇರಿದ್ದು ಎಂಬುದು ವಿಡಿಯೋದಿಂದ ಸ್ಪಷ್ಟವಾಗಿಲ್ಲ.
ವೈದ್ಯಕೀಯ ಕಾರಣಕ್ಕೆ ಜಾಮೀನು ಪಡೆದು ಲಾಲೂ ಪ್ರಸಾದ್ ಬ್ಯಾಡ್ಮಿಂಟನ್ ಆಟ, ಜಾಮೀನು ರದ್ದತಿಗೆ ಮನವಿ