ಕೂಡಂಕುಳಂ ಅಣು ವಿದ್ಯುತ್ ಘಟಕದ ಮೇಲೆ ಸೈಬರ್ ದಾಳಿ ವದಂತಿ, ಆತಂಕ
ದೇಶದ ಅತಿದೊಡ್ಡ ಅಣು ವಿದ್ಯುತ್ ಸ್ಥಾವರ ಕೂಡಂಕುಳಂ ಸಿಸ್ಟಮ್‌ಗಳ ಮೇಲೆ ಸೈಬರ್ ದಾಳಿ ವದಂತಿ | ತನ್ನ ಕಂಪ್ಯೂಟರ್‌ಗಳ ಮೇಲೆ ಸೈಬರ್ ದಾಳಿ ನಡೆಯಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳ ಸ್ಪಷ್ಟನೆ
ಕೂಡಂಕುಳಂ (ಅ. 30): ದೇಶದ ಅತಿದೊಡ್ಡ ಅಣು ವಿದ್ಯುತ್ ಸ್ಥಾವರ ಘಟಕವಾಗಿರುವ ಇಲ್ಲಿನ ಕೂಡಂಕುಳಂ ಸಿಸ್ಟಮ್‌ಗಳ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲು ಹಬ್ಬಿದ ಬೆನ್ನಲ್ಲೇ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೂಡಂಕುಳಂ ಅಣು ವಿದ್ಯುತ್ ಘಟಕ(ಕೆಕೆಎನ್‌ಪಿಪಿ), ತನ್ನ ಕಂಪ್ಯೂಟರ್‌ಗಳ ಮೇಲೆ ಸೈಬರ್ ದಾಳಿ ನಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಡಿಟ್ರ್ಯಾಕ್ ರಾರಯಟ್(DTrackRAT) ಎಂಬ ವೈರಸ್ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಘಟಕದ ನೆಟ್‌ವರ್ಕ್ ಮೇಲೆ ಅಪ್ಪಳಿಸಿದೆ ಎಂಬ ಮಾಹಿತಿ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು. ಇದು ಜನ ಸಾಮಾನ್ಯರಲ್ಲಿ ಭಾರೀ ಆತಂಕವನ್ನುಂಟು ಮಾಡಿದ್ದರೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಹಿನ್ನೆಲೆ ಈ ಬಗ್ಗೆ ಪರಿಶೀಲನೆ ನಡೆಸಿದ ಕೆಕೆಎನ್‌ಪಿಪಿ, ತನ್ನ ಮೇಲೆ ಸೈಬರ್ ದಾಳಿ ನಡೆಯದೆ ಇರುವುದನ್ನು ಖಚಿತಪಡಿಸಿಕೊಂಡಿತು. ಬಳಿಕ, ಈ ಬಗ್ಗೆ ಸ್ಪಷ್ಟನೆ ರೂಪದ ಪ್ರತಿಕ್ರಿಯೆ ನೀಡಿದ ಕೆಕೆಎನ್‌ಪಿಪಿ, ‘ಕೆಕೆಎನ್‌ಪಿಯಲ್ಲಿರುವ ಕಂಪ್ಯೂಟರ್‌ಗಳು ಮತ್ತು ಇತರೆ ಅಣು ವಿದ್ಯುತ್ ಘಟಕಗಳ ನಿಯಂತ್ರಣವನ್ನಿಟ್ಟುಕೊಂಡಿರುವ ಸಿಸ್ಟಂಗಳು ಸುರಕ್ಷಿತವಾಗಿದ್ದು, ಅವುಗಳು ಬಾಹ್ಯ ಸೈಬರ್ ನೆಟ್‌ವರ್ಕ್ಗಳು ಅಥವಾ ಇಂಟರ್ನೆಟ್‌ನೊಂದಿಗೆ ಸಂಪರ್ಕ ಹೊಂದಿಲ್ಲ. ಹೀಗಾಗಿ, ಕೂಡಂಕುಳಂ ವಿದ್ಯುತ್ ಘಟಕದ ಮೇಲೆ ಸೈಬರ್ ದಾಳಿ ನಡೆಯಲು ಸಾಧ್ಯವೇ ಇಲ್ಲ’ ಎಂದು ಹೇಳಿತು.