ಬಿಹಾರದ ಮುಜಾಫರ್‌ಪುರದಲ್ಲಿ ಭಿಕ್ಷುಕಿಯೋರ್ವಳ ಮನೆಯಲ್ಲಿ ಕೆಟಿಎಂ ಬೈಕ್, ಚಿನ್ನ, ವಿದೇಶಿ ನಾಣ್ಯಗಳು ಪತ್ತೆಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ ಆಕೆಯ ಅಳಿಯ ಪರಾರಿಯಾಗಿದ್ದಾನೆ.

ಪಾಟ್ನಾ: ಕಳವು ಪ್ರಕರಣದಲ್ಲಿ ಭಿಕ್ಷುಕನೋರ್ವ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಅಲ್ಲಿ ಕೆಟಿಎಂ ಬೈಕ್, 12 ವಿವಿಧ ಬ್ರಾಂಡ್‌ಗಳ ಮೊಬೈಲ್ ಫೋನ್, ನೇಪಾಳ, ಅಫ್ಘಾನಿಸ್ತಾನ ಕುವೈತ್‌ ಸೇರಿದಂತೆ ವಿವಿಧ ದೇಶಗಳಿಗೆ ಸಂಬಂಧಿಸಿದ ನಾಣ್ಯಗಳು, ಚಿನ್ನದ ಚೈನ್ ಹಾಗೂ ಚಿನ್ನದ ಆಭರಣಗಳನ್ನು ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದರು. ಇಂತಹ ಘಟನೆಯೊಂದು ನಡೆದಿರುವುದು ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ. 

ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ವಿಭಾಗದ ಎಸ್‌ಪಿ ವಿದ್ಯಾ ಸಾಗರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಹೇಳುವಂತೆ ನೀಲಂ ದೇವಿ ಎಂಬ ಮಹಿಳೆ ಭಿಕ್ಷುಕಿಯಾಗಿದ್ದು, ಜನವಸತಿ ಪ್ರದೇಶದಲ್ಲಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿದ್ದಳು. ಆದರೆ ಇತ್ತೀಚೆಗೆ, ಆಕೆ ಸೊಳ್ಳೆ ಪರದೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಆದರೆ ಭಿಕ್ಷಾಟನೆಯ ಹಿಂದಿನ ನಿಜವಾದ ಉದ್ದೇಶ ತನ್ನ ಕಳ್ಳತನದ ಗುರಿಗಳನ್ನು ಗುರುತಿಸುವುದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈಕೆ ಹಗಲು ಮನೆ ಮನೆ ಬಂದು ಸ್ಥಳ ನೋಡಿಕೊಂಡು ಹೋಗುತ್ತಿದ್ದಾರೆ ರಾತ್ರಿ ಈಕೆಯ ಅಳಿಯ ಕೆಲ ನಿರ್ದಿಷ್ಠ ಸ್ಥಳಗಳಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ನೀಲಂ ದೇವಿಯನ್ನು ಬಂಧಿಸಲಾಗಿದ್ದು, ಆತನ ಅಳಿಯ ಚುಟುಕ್ ಲಾಲ್ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳು ತನ್ನ ಅಳಿಯನಿಗೆ ಸೇರಿದ್ದು ಎಂದು ನೀಲಂ ದೇವಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮನೆಯಿಂದ ವಶಪಡಿಸಿಕೊಂಡ ಕೆಟಿಎಂ ಬೈಕ್ ಅನ್ನು ಕಳ್ಳತನಕ್ಕೆ ಬಳಸಲಾಗುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ವಿವಿಧ ಬ್ರಾಂಡ್‌ಗಳ 12 ಮೊಬೈಲ್ ಫೋನ್‌ಗಳು, ನೇಪಾಳ, ಅಫ್ಘಾನಿಸ್ತಾನ ಮತ್ತು ಕುವೈತ್‌ನ ನಾಣ್ಯಗಳು, ಚಿನ್ನದ ಸರ ಮತ್ತು ಇತರ ಚಿನ್ನದ ಆಭರಣಗಳು ಮತ್ತು ಕೆಟಿಎಂ ಬೈಕ್ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಹಿಳೆಯ ಅಳಿಯ ಪರಾರಿಯಾಗಿದ್ದಾನೆ ಮತ್ತು ಆತನ ಬಂಧನವಾದರೆ ಆತನ ಗ್ಯಾಂಗ್‌ನ ಉಳಿದವರನ್ನು ಪತ್ತೆ ಮಾಡಲು ಸುಲಭವಾಗುತ್ತದೆ. ವಿದೇಶಿ ನಾಣ್ಯಗಳು ಆಕೆಯ ಮನೆಗೆ ಹೇಗೆ ತಲುಪಿದವು ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ವಿದ್ಯಾ ಸಾಗರ್ ಹೇಳಿದ್ದಾರೆ.