ಕೋಲ್ಕತಾ(ಮಾ.23): ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 24 ಲಕ್ಷ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದಾಗಿ ಬಿಜೆಪಿ ಇತ್ತೀಚಿಗೆ ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಆದರೆ, ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಹಿಳೆಗೆ ಉಳಿದುಕೊಳ್ಳಲು ಸ್ವಂತ ಮನೆಯೇ ಇಲ್ಲ. ಸ್ನಾನದ ಕೋಣೆ ಕೂಡ ಇಲ್ಲದ ಬಾಡಿಗೆ ಕೋಣೆಯೊಂದರಲ್ಲಿ ಆಕೆ ವಾಸಿಸುತ್ತಿದ್ದಾಳೆ ಎಂಬ ಸಂಗತಿ ಇದೀಗ ಭಾರೀ ಚೆರ್ಚೆಗೆ ಕಾರಣವಾಗಿದೆ.

ಲಕ್ಷ್ಮೇ ದೇವಿ ಎಂಬಾಕೆಯ ಫೋಟೋವನ್ನು ಹಾಕಿ ಫೆ.25ರಂದು ಪ್ರಮುಖ ಪತ್ರಿಕೆಗಳಲ್ಲಿ ‘ಆತ್ಮನಿರ್ಭರ ಭಾರತ, ಆತ್ಮ ನಿರ್ಭರ ಬಂಗಾಳ’ ಶೀರ್ಷಿಕೆಯಡಿ ಕೇಂದ್ರ ಸರ್ಕಾರ ಜಾಹೀರಾತು ನೀಡಿತ್ತು. ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ನನಗೆ ತಲೆಯ ಮೇಲೊಂದು ಸೂರು ಸಿಕ್ಕಿದೆ ಎಂಬ ಲಕ್ಷ್ಮೇ ದೇವಿಯ ಹೇಳಿಕೆಯನ್ನೂ ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು.

ಆದರೆ, ಖಾಸಗಿ ಸುದ್ದಿವಾಹಿನಿಯೊಂದು ಮಹಿಳೆಯನ್ನು ಸಂದರ್ಶಿಸಿದ ಸಂದರ್ಭದಲ್ಲಿ ಆಕೆ, ತನಗೆ ಈ ವಿಷಯ ಗೊತ್ತೇ ಇರಲಿಲ್ಲ. ಪತ್ರಿಕೆಯನ್ನು ನೋಡಿ ಹೆದರಿಕೆ ಆಯಿತು. ಯಾರು ತನ್ನ ಫೋಟೋ ತೆಗೆದರು ಎಂಬುದು ಕೂಡ ಗೊತ್ತಿಲ್ಲ. ತಾನು ಬಹುಬಜಾರ್‌ ಪ್ರದೇಶದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ 6 ಮಂದಿಯ ಜೊತೆಗೆ ವಾಸವಾಗಿದ್ದು, ತಿಂಗಳಿಗೆ 500 ರು. ಬಾಡಿಗೆ ನೀಡುತ್ತಿದ್ದೇವೆ’ ಎಂದು ಹೇಳಿಕೆ ನೀಡಿದ್ದಾಳೆ.