Asianet Suvarna News Asianet Suvarna News

ಕೋಲ್ಕತ್ತಾದಲ್ಲಿ ವೈದ್ಯೆಯ ರೇಪ್‌& ಕೊಲೆ ಕೇಸ್‌: ದೇಶವ್ಯಾಪಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ವೈದ್ಯರ ಕರೆ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಯುವ ವೈದ್ಯೆಯ ಅತ್ಯಾಚಾರ ಕೊಲೆ  ಪ್ರಕರಣ ಖಂಡಿಸಿ ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ಕರೆ ನೀಡಿದ್ದಾರೆ.

Kolkata trainee doctor rape and murder case Doctors call for nationwide indefinite strike akb
Author
First Published Aug 12, 2024, 3:18 PM IST | Last Updated Aug 12, 2024, 3:28 PM IST

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಯುವ ವೈದ್ಯೆಯ ಅತ್ಯಾಚಾರ ಕೊಲೆ  ಪ್ರಕರಣ ಖಂಡಿಸಿ ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆಸ್ಪತ್ರೆಯಲ್ಲೇ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ನಂತರದ ಭೀಕರವಾದ ಕೊಲೆ ಖಂಡಿಸಿ ದೇಶದ ವಿವಿಧ  ಆಸ್ಪತ್ರೆಗಳ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಕೃತ್ಯ ಖಂಡಿಸಿ ಹಾಗೂ ತನಿಖೆ ಫೂರ್ಣಗೊಳ್ಳುವವರೆಗೆ ಆಸ್ಪತ್ರೆಗಳ ನಿಗದಿತ ಸೇವೆಗಳನ್ನು ಸ್ಥಗಿತಗೊಳಸಿ ಪ್ರತಿಭಟನೆ ಮಾಡಲಾಗುವುದು ಎಂದು  ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶದ ಹಲವು ನಗರಗಳ ವೈದ್ಯರು ಘೋಷಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ಭದ್ರತೆ ನೀಡುವಂತೆ ವೈದ್ಯರು ಆಗ್ರಹಿಸಿದ್ದಾರೆ. 

ಕಳೆದ ಗುರುವಾರ ಮಧ್ಯರಾತ್ರಿಯ ನಂತರ ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಟ್ರೈನಿ ವೈದ್ಯೆ ಹಾಗೂ 2ನೇ ವರ್ಷದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ 31 ವರ್ಷದ ವೈದ್ಯೆಯ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯ ಎಮರ್ಜೆನ್ಸಿ ಕಟ್ಟಡದ ಸೆಮಿನಾರ್ ಹಾಲ್‌ನಲ್ಲೇ  ವೈದ್ಯೆಯ ಶವ ಶುಕ್ರವಾರ ಬೆಳಗ್ಗೆ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಖಂಡಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ವಿವಿಧ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಬಹಿಷ್ಕರಿಸಿ ಬೀದಿಗೆ ಇಳಿದಿದ್ದಾರೆ. 

ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್

ಘಟನೆಯ ನಂತರ ನಿನ್ನೆ ಆರ್‌ಜಿ ಕಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಿಟಿ ಪೊಲೀಸ್ ಕಮೀಷನರ್‌ ವೀನಿತ್ ಗೋಯಲ್  ಅಲ್ಲಿನ ಪ್ರತಿನಿಧಿಗಳು ಹಾಗೂ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರ ಜೊತೆ ಸಭೆ ನಡೆಸಿದ್ದರು. ಇದೇ ವೇಳೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಲಾಗುವುದು, ಯಾರೂ ವದಂತಿಗಳನ್ನು ಹಬ್ಬದಂತೆ ಅವರು ಮನವಿ ಮಾಡಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್‌ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. 

ಆರೋಪಿ ಸಂಜಯ್ ರಾಯ್ ಘಟನಾ ಸ್ಥಳದಲ್ಲಿ ತನ್ನ ಬ್ಲೂಟೂಥ್ ಬೀಳಿಸಿಕೊಂಡು ಹೋಗಿದ್ದ, ಇದು ಪೊಲೀಸರಿಗೆ ಆತನ ಬಗ್ಗೆ ಸುಳಿವು ನೀಡಿತ್ತು ಇದರ ಜೊತೆಗೆ ಅಲ್ಲಿದ್ದ ಸಿಸಿಟಿವಿ ದೃಶ್ಯಗಳು ಕೂಡ ಆತ ಎಮರ್ಜೆನ್ಸಿ ಕಟ್ಟಡವನ್ನು ಬೆಳಗ್ಗೆ 4 ಗಂಟೆಯ ವೇಳೆಗೆ ಪ್ರವೇಶಿಸಿದ್ದು, ನಂತರ 40 ನಿಮಿಷ ಕಳೆದು ಅಲ್ಲಿಂದ ನಿರ್ಗಮಿಸಿದ್ದನ್ನು ಸೆರೆ ಹಿಡಿದಿದೆ. ಆತ ಅಲ್ಲಿಗೆ ಹೋಗುವಾಗ ಆತನ ಕತ್ತಿನಲ್ಲಿದ್ದ ಬ್ಲೂಟೂಥ್‌ ವಾಪಸ್ ಬರುವ ವೇಳೆ ಇರಲಿಲ್ಲ.

ಓದೋ ವಯಸ್ಸಲ್ಲಿ ಅನಾಚಾರ ಮಾಡ್ತಿರುವ ವಿದ್ಯಾರ್ಥಿಗಳು: ಎಂಟ್ರಿ ಫೀ ಜೊತೆ ವಾಟ್ಸಾಪ್‌ನಲ್ಲಿ ಆಹ್ವಾನ

ಇತ್ತ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡಲಾಗುತ್ತಿರುವ ಅವಮಾನ ಹಾಗೂ ನನ್ನ ಹೆಸರನಲ್ಲಿ ಬಂದಿರುವ ರಾಜಕೀಯ ಹೇಳಿಕೆಗಳನ್ನು ಸಹಿಸಲಾಗುತ್ತಿಲ್ಲ,  ನಾನು ಹುದ್ದೆಯಿಂದ ಕೆಳಗಿಳಿಯಬೇಕು ಎಂದು ವಿದ್ಯಾರ್ಥಿಗಳು ಪ್ರಚೋದನೆಗೊಳಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕು. ದುರಂತದಲ್ಲಿ ಮೃತಳಾದ ವೈದ್ಯೆ ನನಗೂ ಮಗಳಿದ್ದಂತೆ, ಒಬ್ಬ ಪೋಷಕನಾಗಿ ನಾನು ಘಟನೆ ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಂದೀಪ್ ಘೋಷ್ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios