ಕೊಚ್ಚಿ(ಜೂ.17): ಸರ್ಕಾರಿ ಬ್ಯಾಂಕೊಂದರ ಪಾರದರ್ಶಕ ಗಾಜಿನ ಬಾಗಿಲಿಗೆ ರಭಸವಾಗಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಸೋಮವಾರ ನಡೆದಿದೆ. ಬಾಗಿಲಿಗೆ ಮಹಿಳೆ ಡಿಕ್ಕಿ ಹೊಡೆದು ಕುಸಿದು ಬೀಳುವ ಹಾಗೂ ರಕ್ತ ಹರಿಯುವ ದೃಶ್ಯ ಬ್ಯಾಂಕಿನ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್‌ ಆಗಿದೆ. ಗಾಜಿನ ಬಾಗಿಲುಗಳು ತಕ್ಷಣಕ್ಕೆ ಗೋಚರವಾಗದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಬೀನಾ ಪೌಲ್‌ ಎಂಬ ಮಹಿಳೆ ಬ್ಯಾಂಕ್‌ ಆಫ್‌ ಬರೋಡಾ ಶಾಖೆಗೆ ಕಾರ್ಯನಿಮಿತ್ತ ಬಂದಿದ್ದರು. ಆದರೆ ಒಳಗೆ ಬಂದ ಮೇಲೆ ಸ್ಕೂಟರ್‌ನ ಕೀಯನ್ನು ಮರೆತು ಬಂದಿರುವುದು ನೆನಪಾಗಿ ಗಾಬರಿಯಿಂದ ಹೊರಗೆ ಓಡಿದ್ದಾರೆ. ಈ ವೇಳೆ ಅವರು ಬ್ಯಾಂಕ್‌ನ ಪ್ರವೇಶ ದ್ವಾರದ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದಿದ್ದಾರೆ.

ಮಂಚ ಸಮೇತ ಬ್ಯಾಂಕ್‌ ಕೇಸ್‌: ಒಡಿಶಾ ಬ್ಯಾಂಕ್‌ ಮ್ಯಾನೇಜರ್‌ ಸಸ್ಪೆಂಡ್‌!

ಡಿಕ್ಕಿಯ ರಭಸಕ್ಕೆ ಗಾಜಿನ ಬಾಗಿಲು ಚೂರಾಗಿದೆ. ತಕ್ಷಣವೇ ಬೀನಾ ಕುಸಿದುಬಿದ್ದಿದ್ದಾರೆ. ಗಾಜಿನ ಚೂರು ಹೊಟ್ಟೆಯ ಭಾಗಕ್ಕೆ ಚುಚ್ಚಿದೆ. ಆದಾಗ್ಯೂ ಬೀನಾ ಎದ್ದು ಕೂತಿದ್ದಾರೆ. ಬ್ಯಾಂಕಿನಲ್ಲಿದ್ದವರು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಐದು ನಿಮಿಷದಲ್ಲಿ ಅವರು ಮೃತಪಟ್ಟಿದ್ದಾರೆ.

ಮೃತ ಮಹಿಳೆಯ ಪತಿ ಬ್ಯಾಂಕ್‌ ಸಮೀಪದಲ್ಲೇ ಎಲೆಕ್ಟ್ರಿಕ್‌ ಶಾಪ್‌ ನಡೆಸುತ್ತಿದ್ದು, ಪತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.