ಭುವನೇಶ್ವರ(ಜೂ.16): 500 ರುಪಾಯಿ ಪಿಂಚಣಿ ಪಡೆಯಲು ಮಹಿಳೆಯೊಬ್ಬಳು ತನ್ನ 80 ವರ್ಷದ ಅನಾರೋಗ್ಯ ಪೀಡಿತ ತಾಯಿಯನ್ನು ಮಂಚದ ಸಮೇತ ಎಳೆದೊಯ್ದ ಘಟನೆ ಸಂಬಂಧ, ಬ್ಯಾಂಕ್‌ ಮ್ಯಾನೇಜರ್‌ನನ್ನು ಅಮಾನತು ಮಾಡಲಾಗಿದೆ. 

ಈ ಅಮಾನವೀಯ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಕೂಡಲೇ ಒಡಿಶಾದ ನೌಪಾರಾ ಜಿಲ್ಲೆಯ ಗ್ರಾಮದ ಬ್ಯಾಂಕ್ ಮ್ಯಾನೇಜರ್ ಅಜಿತ್ ಪ್ರಧಾನ್‌ರನ್ನು ಅಮಾನತ್ತುಗೊಳಿಸಿದ್ದಾರೆ.

ಏನಿದು ಘಟನೆ?

ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಡ ಮಹಿಳೆಯರ ಜನಧನ್‌ ಬ್ಯಾಂಕ್‌ ಖಾತೆಗೆ ಏಪ್ರಿಲ್‌ನಿಂದ ಜೂನ್‌ ತಿಂಗಳವರೆಗೆ 500 ರು. ನರವು ನೀಡುವುದಾಗಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 3 ತಿಂಗಳ ಅವಧಿಯ 1500 ರು. ಪಡೆಯುವ ಸಲುವಾಗಿ 60 ವರ್ಷದ ಪುಂಜಿಮತಿ ದೇವಿ ಎಂಬಾಕೆ ಉತ್ಕಲ್‌ ಗ್ರಾಮೀಣ ಬ್ಯಾಂಕಿನ ಸ್ಥಳೀಯ ಶಾಖೆಯೊಂದಕ್ಕೆ ತೆರಳಿದ್ದರು. ಆದರೆ, ಹಣ ನೀಡಲು ನಿರಾಕರಿಸಿದ್ದ ಬ್ಯಾಂಕ್‌ ಮ್ಯಾನೇಜರ್‌ ತಾಯಿಯನ್ನು ಖುದ್ದಾಗಿ ಬ್ಯಾಂಕಿಗೆ ಕರೆತರುವಂತೆ ಸೂಚಿಸಿದ್ದರು. ತನ್ನ ತಾಯಿ ಹಾಸಿಗೆ ಹಿಡಿದಿದ್ದು ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೂ ಬ್ಯಾಂಕ್‌ ಮ್ಯಾನೇಜರ್‌ ಹಣ ನೀಡಲು ಒಪ್ಪಿರಲಿಲ್ಲ. ಹೀಗಾಗಿ ಪುಂಜಿಮತಿ ದೇವಿ ತನ್ನ ತಾಯಿಯನ್ನು ಮಂಚದ ಸಮೇತ ಬ್ಯಾಂಕಿಗೆ ಕರೆದೊಯ್ದು ಹಣ ಪಡೆದುಕೊಂಡಿದ್ದಳು