Asianet Suvarna News Asianet Suvarna News

ಅನಧಿಕೃತ ಧಾರ್ವಿಕ ಕಟ್ಟಡ ತೆರವು ವಿವಾದ; ಸುಪ್ರೀಂಕೋರ್ಟ್ ಹೇಳಿದ್ದೇನು.?

ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಮಂಜೂರಾತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾದ ಕಟ್ಟಡಗಳು ಅನಧಿಕೃತ ಕಟ್ಟಡಗಳು ಎಂದು ಸುಪ್ರೀಂಕೋರ್ಟ್‌ ವ್ಯಾಖ್ಯಾನಿಸಿತ್ತು.

Know What Supreme Court Said in Judgement on Illegal Religious Structure hls
Author
Bengaluru, First Published Sep 16, 2021, 4:53 PM IST

ನವದೆಹಲಿ (ಸೆ. 16): ವಿಶ್ವವಿಖ್ಯಾತ ದಸರಾ ಸಮೀಪಿಸುತ್ತಿರುವ ನಡುವೆಯೇ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಸಂಬಂಧ ಮೈಸೂರು ವಿವಾದದ ಕೇಂದ್ರ ಬಿಂದುವಾಗಿದೆ. ಆಡಳಿತ ಪಕ್ಷ, ವಿರೋಧ ಪಕ್ಷಗಳೆಂಬ ಭೇದವಿಲ್ಲದೆ ರಾಜಕಾರಣಿಗಳು, ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಹಿಂದೂ ಧಾರ್ಮಿಕ ಕಟ್ಟಡಗಳ ತೆರವಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಕಾಏಕಿ ಅನಧಿಕೃತ ದೇಗುಲ ತೆರವು ಪ್ರಸ್ತಾಪ ಮುನ್ನೆಲೆಗೆ ಬರಲು ಕಾರಣ ಏನು, ಈ ಬಗ್ಗೆ ಸುಪ್ರೀಂಕೋರ್ಟ್‌ ಆದೇಶ ಏನು ಎಂಬ ವಿವರ ಇಲ್ಲಿದೆ.

ಸುಪ್ರೀಂಕೋರ್ಟ್‌ ಏನು ಹೇಳಿತ್ತು?

ಸರ್ಕಾರಿ ಜಾಗಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಎಲ್ಲಾ ರಾಜ್ಯ ಸರ್ಕಾರಗಳಿಗೆ 2009ರ ಸೆ.29 ರಂದು ಆದೇಶ ನೀಡಿತ್ತು. ದೇವರು ಮತ್ತು ಧರ್ಮದ ಹೆಸರಲ್ಲಿ ಸರ್ಕಾರಿ ರಸ್ತೆ, ಪಾರ್ಕ್, ಮೈದಾನದಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಮುಂತಾದ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಕಟ್ಟಬಾರದು. 2009ರ ಸೆ.29ರ ಬಳಿಕ ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು.

2009 ಕ್ಕೂ ಮುಂಚೆ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ಬಗ್ಗೆ ಜಿಲ್ಲಾಡಳಿತವೇ ಪರಿಶೀಲಿಸಲಿ. 2009ಕ್ಕಿಂತ ಹಳೆಯ ಕಟ್ಟಡವಾಗಿದ್ದಲ್ಲಿ 3 ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕಟ್ಟಡ ನೆಲಸಮ ಮಾಡಬೇಕಾ, ಸ್ಥಳಾಂತರಿಸಬೇಕಾ ಅಥವಾ ಉಳಿಸಿಕೊಳ್ಳಬೇಕಾ ಎಂಬ ಬಗ್ಗೆ ಜಿಲ್ಲಾಡಳಿತ ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಜೊತೆಗೆ ಸರ್ಕಾರದ ಮುಖ್ಯ ಕಾರ‍್ಯದರ್ಶಿಗಳನ್ನು ಅನಧಿಕೃತ ಧಾರ್ಮಿಕ ಕಟ್ಟಡ ವಿಚಾರದಲ್ಲಿ ಉತ್ತರದಾಯಿಯನ್ನಾಗಿಸಿತ್ತು. ಈ ಕುರಿತು ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಈ ಆದೇಶ ಪಾಲನೆ ಸಂಬಂಧ ಸ್ವಯಂಪ್ರೇರಿತವಾಗಿ ಮೇಲುಸ್ತುವಾರಿ ವಹಿಸುವಂತೆ ಹೈಕೋರ್ಟ್‌ಗಳಿಗೆ 2018ರಲ್ಲಿ ನಿರ್ದೇಶನ ನೀಡಿದೆ.

ಅನಧಿಕೃತ ಅಂದರೆ ಏನು?

ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಮಂಜೂರಾತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾದ ಕಟ್ಟಡಗಳು ಅನಧಿಕೃತ ಕಟ್ಟಡಗಳು ಎಂದು ಸುಪ್ರೀಂಕೋರ್ಟ್‌ ವ್ಯಾಖ್ಯಾನಿಸಿತ್ತು. ಸರ್ಕಾರಿ ರಸ್ತೆ, ಪಾರ್ಕ್, ಮೈದಾನ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣವಾದ ಅಕ್ರಮ ಧಾರ್ಮಿಕ ಕೇಂದ್ರಗಳು ಇದರ ವ್ಯಾಪ್ತಿಗೆ ಬರುತ್ತವೆ.

ಏಕಾಏಕಿ ಸಮಸ್ಯೆ ಸೃಷ್ಟಿಯಾಗಿದ್ದು ಹೇಗೆ?

2009ರ ಸೆ.29ರ ನಂತರ ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ಜಿಲ್ಲಾಡಳಿತಗಳು ಪಟ್ಟಿಮಾಡಿ, ಆ ಧಾರ್ಮಿಕ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಆದರೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಬರೋಬ್ಬರಿ 12 ವರ್ಷಗಳಾದರೂ ಕರ್ನಾಟಕ ಸರ್ಕಾರ ಅಥವಾ ಜಿಲ್ಲಾಡಳಿತಗಳು ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಪಟ್ಟಿಮಾಡಿಲ್ಲ.

12 ವರ್ಷಗಳ ಕಾಲ ಸುಮ್ಮನೆ ಇದ್ದ ಕರ್ನಾಟಕ ಸರ್ಕಾರ ಹೈಕೊರ್ಟಿಗೆ ವರದಿ ಸಲ್ಲಿಸಲು ಆರಂಭಿಸಿದ್ದು 2019ರಲ್ಲಿ. ಅದೂ ಸ್ವತಃ ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಆರಂಭಿಸಿದ ನಂತರ. ಹೀಗಾಗಿ ತೆರವುಗೊಳಿಸಬೇಕಾದ ಧಾರ್ಮಿಕ ಕೇಂದ್ರಗಳ ಪಟ್ಟಿಸಿದ್ಧಪಡಿಸುವಲ್ಲಿ ಗೊಂದಲ ಉಂಟಾಗಿದೆ. ಇಲ್ಲಿ ತರಾತುರಿಯಲ್ಲಿ ವಿವೇಚನಾರಹಿತ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಟೀಕೆಗಳಿವೆ. ಹೀಗಾಗಿ ಇದು ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಸುಪ್ರೀಂ ಆದೇಶ ಜಾರಿಯಲ್ಲಿ ಸರ್ಕಾರ ಎಡವಿದೆಯೇ?

2009ರ ಸೆ.29ಕ್ಕೂ ಮುಂಚೆ ಮತ್ತು ನಂತರ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತಗಳು ಗುರುತಿಸಬೇಕಿತ್ತು. ಪ್ರತಿ ಧಾರ್ಮಿಕ ಸ್ಥಳಗಳ ಕುರಿತೂ ಸಮರ್ಪಕ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕಿತ್ತು. ಆ ಧಾರ್ಮಿಕ ಕಟ್ಟಡಗಳ ಐತಿಹ್ಯ, ಜನರ ನಂಬಿಕೆ ಇತ್ಯಾದಿ ಅಂಶಗಳನ್ನು ವಿಮರ್ಶಿಸಿ ಉಳಿಸಿಕೊಳ್ಳಲು ಸರ್ಕಾರ ಆದೇಶಿಸಬಹುದಿತ್ತು. ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ಡುವಂತೆ ರಸ್ತೆಗೆ ಅಡ್ಡಲಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿದ್ದರೆ ಅಂಥವುಗಳನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸಬಹುದಿತ್ತು. ತೀರಾ ಅಗತ್ಯವಿದ್ದರೆ ನೆಲಸಮ ಮಾಡುವ ಬಗ್ಗೆಯೂ ಆದೇಶಿಸಬಹುದಿತ್ತು. ಸ್ಥಳೀಯರಿಂದ ಜನಾಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬಹುದಿತ್ತು.

ಕರ್ನಾಟಕದಲ್ಲಿ 6000ಕ್ಕೂ ಅಧಿಕ ಅಕ್ರಮ ಧಾರ್ಮಿಕ ಕೇಂದ್ರ!

ಸರ್ಕಾರದ ಉನ್ನತ ಮೂಲಗಳ ಪ್ರಕಾರ ಕರ್ನಾಟಕದಲ್ಲಿ 6395 ಅಕ್ರಮ ಧಾರ್ಮಿಕ ಕೇಂದ್ರಗಳಿವೆ ಎಂದು ಗುರುತಿಸಲಾಗಿದೆ. 12 ವರ್ಷಗಳಲ್ಲಿ ಈ ಪೈಕಿ 2887 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಅಥವಾ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ 2009ರ ಸುಪ್ರೀಂಕೋರ್ಟ್‌ ಆದೇಶದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,242 ಧಾರ್ಮಿಕ ಕಟ್ಟಡಗಳು ಹೊಸದಾಗಿ ತಲೆ ಎತ್ತಿವೆ. ಹೀಗಾಗಿ ಇನ್ನೂ 2989 ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಬಾಕಿಯಿದೆ.

ಎಲ್ಲೆಲ್ಲಿ ಎಷ್ಟುಅನಧಿಕೃತ ಧಾರ್ಮಿಕ ಕೇಂದ್ರಗಳಿವೆ?

ದಕ್ಷಿಣ ಕನ್ನಡ 1579

ಶಿವಮೊಗ್ಗದಲ್ಲಿ 740

ಬೆಳಗಾವಿ 612

ಬೆಂಗಳೂರು 456

ಮೈಸೂರು 315

ಹುಬ್ಬಳ್ಳಿ ಮತ್ತು ಧಾರವಾಡ 324

ಕೋಲಾರ 352

ಕೊಪ್ಪಳ 306

ಮುಂದೇನಾಗಬಹುದು?

ಸದ್ಯ ಕರ್ನಾಟಕ ಸರ್ಕಾರ ರಾಜ್ಯದ ಅಕ್ರಮ ಧಾರ್ಮಿಕ ಕೇಂದ್ರಗಳ ನೆಲಸಮ ಪ್ರಕ್ರಿಯೆಗೆ ತಡೆ ನೀಡಿದೆ. ಧಾರ್ಮಿಕ ಕೇಂದ್ರಗಳ ತೆರವಿಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ವಿರೋಧವಿರುವುದರಿಂದ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಈ ಕುರಿತು ಮತ್ತೆ ಹೈಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಬಹುದು. ನಂತರ ಹೈಕೋರ್ಟ್‌ನ ಆದೇಶದಂತೆ ಕ್ರಮ ಕೈಗೊಳ್ಳಬಹುದು. ಅಥವಾ ಪಟ್ಟಿಮಾಡಿರುವ ಅಕ್ರಮ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಕಾನೂನುಬದ್ಧವಾಗಿ ನಿರ್ಧಾರ ಕೈಗೊಳ್ಳಬಹುದು. ಅಥವಾ ವಿರೋಧವನ್ನು ಲೆಕ್ಕಿಸದೆ ಅಕ್ರಮ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬಹುದು.

ಗುಜರಾತ್‌ನಲ್ಲಿ ಹುಟ್ಟಿದ ವಿವಾದ ಇದು

ಅನಧಿಕೃತ ಧಾರ್ಮಿಕ ಕಟ್ಟಡಗಳು ನಿತ್ಯ ತಲೆ ಎತ್ತುತ್ತಿವೆ ಎಂಬ ಮಾಧ್ಯಮವೊಂದರ ವರದಿ ಉಲ್ಲೇಖಿಸಿ 2008ರಲ್ಲಿ ಗುಜರಾತಿನ ಅಹಮದಾಬಾದ್‌ ಹೈಕೊರ್ಟ್‌ ಅನಧಿಕೃತ ಕಟ್ಟಡ ತೆರವು ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ನಂತರ ಆ ಪ್ರಕರಣ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಸುಪ್ರೀಂಕೋಟ್‌ 2009ರಲ್ಲಿ ದೇಶಾದ್ಯಂತ ಧರ್ಮದ ಹೆಸರಿನಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿತ್ತು.

12 ವರ್ಷಗಳಲ್ಲಿ ನಡೆದಿದ್ದೇನು?

2009 - ಸೆ.29, 2009ರ ನಂತರ ಸರ್ಕಾರಿ ಜಾಗಗಳಲ್ಲಿ ನಿರ್ಮಾಣವಾದ ಧಾರ್ಮಿಕ ಕಟ್ಟಡ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶ.

2010- 2009ರ ಸುಪ್ರೀಂಕೊರ್ಟ್‌ ಆದೇಶಕ್ಕೂ ಮೊದಲು ನಿರ್ಮಾಣವಾದ ಅನಧಿಕೃತ ಕಟ್ಟಡದ ಬಗ್ಗೆ ಸಮಗ್ರ ನೀತಿ ರೂಪಿಸಲು ರಾಜ್ಯಗಳಿಗೆ ಸೂಚನೆ.

2018- ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಆದೇಶ ಅನುಷ್ಠಾನದ ಮೇಲ್ವಿಚಾರಣೆ ಹೊಣೆ ಹೈಕೋರ್ಟ್‌ಗೆ ವಹಿಸಿ ಸುಪ್ರೀಂಕೋರ್ಟ್‌ ಆದೇಶ.

2019- ಸುಪ್ರೀಂಕೋರ್ಟ್‌ ಆದೇಶದ ಅನುಸಾರ ಕರ್ನಾಟಕ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು, ಅಕ್ರಮ ಕಟ್ಟಡಗಳ ತೆರವಿಗೆ ಆದೇಶ.

Follow Us:
Download App:
  • android
  • ios