Gyanvapi: 6 ಗಂಟೆಗಳ ಎಎಸ್‌ಐ ಸರ್ವೇ, ಇಂದು ಜ್ಞಾನವಾಪಿ ಸಮೀಕ್ಷೆಯಲ್ಲಿ ಆಗಿದ್ದೇನು?
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಸುಮಾರು 6 ಗಂಟೆಗಳ ಕಾಲ ಜ್ಞಾನವಾಪಿಯಲ್ಲಿ ಎಎಸ್ಐ ಸರ್ವೆ ಕಾರ್ಯ ನಡೆಯಿತು. ಈ ಸಮಯದಲ್ಲಿ, ಜ್ಞಾನವಾಪಿಯ ಪಶ್ಚಿಮ ಗೋಡೆಯ ಫೋಟೋವನ್ನು ತೆಗೆದುಕೊಳ್ಳಲಾಗಿದೆ. ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಮಾತ್ರ ಸರ್ವೆ ಮಾಡಿಲ್ಲ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಮೀಕ್ಷೆ ಆರಂಭವಾಗಲಿದೆ.
ವಾರಣಾಸಿ (ಆ.4): ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶುಕ್ರವಾರ ಸುಮಾರು 6 ಗಂಟೆಗಳ ಕಾಲ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸಮೀಕ್ಷೆಯ ಪ್ರಕ್ರಿಯೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆ 11.30ರವರೆಗೆ ನಡೆಯಿತು. ನಂತರ ಶುಕ್ರವಾರದ ಪ್ರಾರ್ಥನೆಯಿಂದಾಗಿ ಮಧ್ಯಾಹ್ನ 2.30ರವರೆಗೆ 3 ಗಂಟೆಗಳ ಕಾಲ ಸರ್ವೆ ಕಾರ್ಯ ಸ್ಥಗಿತಗೊಂಡಿತ್ತು. ಇದಾದ ಬಳಿಕ ತಂಡದಿಂದ ಮಧ್ಯಾಹ್ನ 2.30ರ ನಂತರ ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಆರಂಭವಾಯಿತು. ಶುಕ್ರವಾರ ಜ್ಞಾನವಾಪಿಯಲ್ಲಿ ನಮಾಜ್ ಇದ್ದ ಕಾರಣದಿಂದಾಗಿ ಪೇಪರ್ ವರ್ಕ್‌ಗಳು ಹೆಚ್ಚಾಗಿ ನಡೆದವು. ಅದರೊಂದಿಗೆ ಜ್ಞಾನವಾಪಿಯ ಪಶ್ಚಿಮ ಗೋಡೆಯ ಫೋಟೋಗಳನ್ನು ಎಎಸ್‌ಐ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಶುಕ್ರವಾರದ ಇಡೀ ದಿನದ ಸಮೀಕ್ಷೆ ಮುಕ್ತಾಯವಾಗುವವರೆಗೂ ಹಿಂದೂ ಕಡೆಯವರಿಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಒಂದೆಡೆ ಹೈಕೋರ್ಟ್ ನೀಡಿದ್ದ ರ್ವೇ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಸೀದಿ ಸಮಿತಿಗೆ ಅಲ್ಲೂ ಹಿನ್ನಡೆಯಾಗಿದೆ.
ಇನ್ನೊಂದೆಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡಿದೆ. ಶನಿವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಸರ್ವೇ ಕಾರ್ಯ ಆರಂಭವಾಗಲಿದೆ.
ನೆಲಮಾಳಿಗೆಯಲ್ಲಿ ನಡೆಯದ ಸರ್ವೇ ಕಾರ್ಯ: ಸಮೀಕ್ಷೆಯ ಪ್ರಕ್ರಿಯೆಗಳ ನಂತರ, ತಂಡದ ಫಿರ್ಯಾದಿದಾರರಾದ ರೇಖಾ ಪಾಠಕ್ ಅವರು ಮಾತನಾಡಿದ್ದು, ಜ್ಞಾನವಾಪಿ ಮಸೀದಿಯಲ್ಲಿ ಸುಪ್ರೀಂ ಕೋರ್ಟ್ ಸೀಲ್ ಮಾಡಿರುವ ವಜುಕಾನಾ ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಸರ್ವೇ ನಡೆಸಲಾಗುತ್ತದೆ. ಇಡೀ ಪ್ರದೇಶದ ಅಳತೆಗಳನ್ನೂ ಕೂಡ ಮಾಡಲಾಗುತ್ತದೆ. ನೆಲಮಾಳಿಗೆಯಲ್ಲಿ ಇನ್ನೂ ಅಧಿಕಾರಿಗಳು ಹೊಕ್ಕಿಲ್ಲ. ಶುಕ್ರವಾರ ಮುಸ್ಲಿಂ ಕಡೆಯವರು ಈ ಪ್ರದೇಶದ ಬೀಗವನ್ನು ತೆರೆಯುವುದಾಗಲಿ, ಅದರ ಕೀಲಿಗಳನ್ನು ನೀಡುವುದಾಗಲಿ ಮಾಡಿಲ್ಲ. ಮಸೀದಿ ಸಮಿತಿಯ ಅಧಿಕಾರಿಗಳು ಶುಕ್ರವಾರ ಪ್ರದೇಶಕ್ಕೆ ಬಂದಿರಲಿಲ್ಲ. ಶನಿವಾರ ಆಗಮಿಸಿ, ಸಮೀಕ್ಷೆಗೆ ಸಹಕಾರ ನೀಡುವ ಸಾಧ್ಯತೆ ಇದೆ. ಜ್ಞಾನವಾಪಿಯ ಪಶ್ಚಿಮ ಭಾಗದ ಗೋಡೆಗಳ ಫೋಟೋಗಳನ್ನು ತೆಗೆದುಕೊಳ್ಳಲಾಗಿದ್ದು, ಜಿಪಿಆರ್ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದರು.
ಮತ್ತೊಂದೆಡೆ, ಎಎಸ್‌ಐ ಸಮೀಕ್ಷಾ ತಂಡದ ಭಾಗವಾಗಿದ್ದ ವಾರಣಾಸಿಯ ಜಿಲ್ಲಾ ಸರ್ಕಾರಿ ವಕೀಲ (ಸಿವಿಲ್) ಮಹೇಂದ್ರ ಪ್ರಸಾದ್ ಪಾಂಡೆ, ಇಂದಿನ ಪ್ರಕ್ರಿಯೆಗಳು ಪೇಪರ್ ವರ್ಕ್‌ನಿಂದ ಮೊದಲು ಆರಂಭವಾಯಿತು ಎಂದರು. ಇನ್ನುಳಿದ ಕೆಲಸ ಶನಿವಾರ ನಡೆಯಲಿದ್ದು, ದೊಡ್ಡ ಕಾರ್ಯವಾಗಿದೆ. ಈ ವಿಚಾರವಾಗಿ ವಾರಣಾಸಿಯ ಕಾಶಿ ವಲಯದ ಡಿಸಿಪಿ ಅರಸ್ ಗೌತಮ್ ಮಾತನಾಡಿ, ಇಂದು ಎಲ್ಲಾ ಕೆಲಸಗಳು ಉತ್ತಮ ರೀತಿಯಲ್ಲಿ ಪೂರ್ಣಗೊಂಡಿವೆ. ದರ್ಶನ-ಪೂಜೆಯಲ್ಲೂ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ, ಶನಿವಾರವೂ ಎಲ್ಲವೂ ಸುಸೂತ್ರವಾಗಿ ನೆರವೇರಲಿದೆ ಎಂದಿದ್ದಾರೆ.
ಜ್ಞಾನವಾಪಿ ಕ್ಯಾಂಪಸ್ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸಮೀಕ್ಷೆ ವೇಳೆ ಮಸೀದಿ ಮುಟ್ಟಬೇಡಿ: ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪಾಲಿಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ರಿಲೀಫ್ ನೀಡಿತ್ತು. ಶುಕ್ರವಾರ, ಅಲಹಾಬಾದ್ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು, ಇದರಲ್ಲಿ ಎಎಸ್‌ಐಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಲಾಯಿತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಎಎಸ್‌ಐ ಸಮೀಕ್ಷೆಯ ಸಮಯದಲ್ಲಿ ಮಸೀದಿಯನ್ನು ಮುಟ್ಟಬಾರದು ಮತ್ತು ಯಾವುದೇ ಪ್ರದೇಶನವನ್ನು ಅಗೆಯುವ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದರು.
ಹಿಂದೂಗಳ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ!