ತಿಮ್ಮಪ್ಪನಿಗೆ ತುಪ್ಪ ಕೊಡ್ತೀವೆಂದು ತಿರುಪತಿಗೆ ಪತ್ರ ಬರೆದ ಕೆಎಂಎಫ್
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ತಯಾರಿಕೆಗೆ ನಿಲ್ಲಿಸಲಾಗಿದ್ದ ತುಪ್ಪ ಸರಬರಾಜು ಮಾಡುವುದಾಗಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪತ್ರ ಬರೆದಿದೆ.
ಬೆಂಗಳೂರು (ಆ.03): ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ತಯಾರಿಕೆಗೆ ನಿಲ್ಲಿಸಲಾಗಿದ್ದ ತುಪ್ಪ ಸರಬರಾಜನ್ನು, ಪುನಃ ಸರಬರಾಜು ಮಾಡಲು ಉತ್ಸುಕರಾಗಿದ್ದೇವೆ. ಆದ್ದರಿಂದ ಒಂದು ಸುತ್ತಿನ ಮಾತುಕತೆ ನಡೆಸಿ ದರ ನಿಗದಿ ಮಾಡಿದಲ್ಲಿ ತುಪ್ಪ ಸರಬರಾಜು ಮಾಡಿತ್ತೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವತಿಯಿಂದ ತಿರುಪತಿ ತಿಮ್ಮಪ್ಪ ದೇವಸ್ಥಾನಂ ಟ್ರಸ್ಟ್ (ಟಿಟಿಡಿ)ಗೆ ಪತ್ರ ಬರೆದಿದೆ.
ತಿರುಪತಿ ತಿರುಮಲ ಲಡ್ಡು ಪ್ರಸಾದಕ್ಕೆ ಕೆಎಂಎಫ್ ತುಪ್ಪ ಸಪ್ಲೈ ಮಾಡಲ್ಲ ಎಂಬ ವಿಚಾರ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿತ್ತು. ಆದರೆ, ಟಿಟಿಡಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವ ಟೆಂಡರ್‌ನಲ್ಲಿ ಭಾಗವಹಿಸದೇ ದೂರ ಉಳಿದಿದ್ದ ಕರ್ನಾಟಕ ಹಾಲು ಮಹಾಮಂಡಳವು ಈಗ, ತುಪ್ಪ ಸರಬರಾಜು ಮಾಡುವುದಾಗಿ ಮುಂದೆ ಬಂದಿದೆ. ಈ ಕುರಿತು ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಪತ್ರ ಬರೆದಿದೆ. ಟಿಟಿಡಿ ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿರುವ ಕೆಎಂಎಫ್, ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಾವು ನಿಮಗೆ ತುಪ್ಪ ಸರಬರಾಜು ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ಅದಕ್ಕಿಂತ ಮುಂಚೆ ಒಂದು ಸಭೆಯನ್ನು ನಮ್ಮ ಜೊತೆ ಆಯೋಜನೆ ಮಾಡಿ. ಈ ಸಭೆಯಲ್ಲಿ ದರದ ಬಗ್ಗೆ ಚರ್ಚೆ ಮಾಡೋಣ. ದರ ನಿಗದಿಗೊಳಿಸಿದ ನಂತರ ತುಪ್ಪ ಸರಬರಾಜು ಮಾಡುತ್ತೇವೆ ಎಂದು ಪತ್ರವನ್ನು ಬರೆಯಲಾಗಿದೆ.
ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್
ನಮ್ಮದು (ಕೆಎಂಎಫ್) ಸಹಕಾರ ಸಂಸ್ಥೆಯಾಗಿದ್ದು ಟೆಂಡರ್ ನಲ್ಲಿ ಭಾಗಿಯಾಗಿಲ್ಲ. ತುಂಬಾ ಗುಣಮಟ್ಟದ ತುಪ್ಪವನ್ನು ನಂದಿನಿ ಗ್ರಾಹಕರಿಗೆ ತಲುಪಿಸುತ್ತಾ ಬಂದಿದೆ. ಹೀಗಾಗಿ, ಟಿಟಿಡಿಗೂ ಕೂಡ ತುಪ್ಪ ನೀಡಲು ನಾವು ಖುಷಿಯಿಂದ ಕಾತುರರಾಗಿದ್ದೇವೆ. ಒಂದು ಸಭೆಯನ್ನು ಆಯೋಜನೆ ಮಾಡಿ ದರದ ಬಗ್ಗೆ ಚರ್ಚಿಸೋಣ ಎಂದು ಕೆಎಂಎಫ್ ವತಿಯಿಂದ ಟಿಟಿಡಿಗೆ ಪತ್ರ ಬರೆಯಲಾಗಿದೆ. ಆದರೆ, ಈ ಬಗ್ಗೆ ತಿರುಪತಿ ತಿಮ್ಮಪ್ಪ ದೇವಸ್ಥಾನ ಟ್ರಸ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ದಕ್ಷಿಣ ಭಾರತದ ಹಾಲು ಉತ್ಪಾದನೆಯ ಅತ್ಯುನ್ನತ ಸಂಸ್ಥೆ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (KMF)ದ ನಂದಿನಿ ಬ್ರ್ಯಾಂಡ್ ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚು ಬೆಳೆದಿದೆ. ಈಗ ಇದು ದೇಶದ ಸಹಕಾರಿ ಡೈರಿ ಉದ್ಯಮದಲ್ಲಿ ಎರಡನೇ ಅತಿದೊಡ್ಡ ಬ್ರಾಂಡ್ ಆಗಿದೆ. ದಕ್ಷಿಣದಲ್ಲಿ ಹಾಲು ಉತ್ಪಾದನೆಯಲ್ಲಿ ಅತ್ಯುತ್ತಮ ಸಂಸ್ಥೆಯಾಗಿದೆ. ಕೆಎಂಎಫ್ ಮತ್ತು ಅದಕ್ಕೆ ಸಂಯೋಜಿತವಾಗಿರುವ ಹಾಲು ಒಕ್ಕೂಟಗಳು ದಿನಕ್ಕೆ ಸರಾಸರಿ 86 ಲಕ್ಷ ಕೆ.ಜಿ. ಹಾಲನ್ನು ನಿರ್ವಹಿಸುತ್ತಿವೆ.
ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟದಲ್ಲಿ ರಾಜಿಯಿಲ್ಲ: ಅಲ್ಪ ಮತ್ತು ದೀರ್ಘಾವಧಿಯ ಹಾಲಿನ ಉತ್ಪನ್ನಗಳ ವ್ಯಾಪಕ ಶ್ರೇಣಿಯಲ್ಲಿ ಬಳಕೆಗೆ ಅನುಕೂಲ ಆಗುವಂತೆ ಹಾಲನ್ನು ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇನ್ನು ಸ್ವಚ್ಛತೆ ಮತ್ತು ಗುಣಮಟ್ಟದಲ್ಲಿ (ISO 22000/HACCP) ಪ್ರಮಾಣೀಕೃತ ಆಗಿದೆ. ಇಲ್ಲಿ ಅತ್ಯಂದ ಹಿರಿಯ ಮತ್ತು ನುರಿತ ಉದ್ಯೋಗಿಗಳಿದ್ದು, ಹಾಲಿನ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಕೆಎಂಎಫ್ ಒಂದು ರೈತರ ಸಹಕಾರಿ ಒಕ್ಕೂಟವಾಗಿದ್ದು, ಈ ಮೂಲಕ ರೈತರು ಸೇರಿದಂತೆ ಸಂಸ್ತೆಯನ್ನು ಕೂಡ ಬಲಪಡಿಸಬೇಕಿದೆ.
ತುಪ್ಪದ ಟೆಂಡರ್‌ನಲ್ಲೇ ಕೆಎಂಎಫ್ ಭಾಗವಹಿಸಿಲ್ಲ: ಟಿಟಿಡಿ
ದರದ ಬಗ್ಗೆ ಚರ್ಚೆ ಮಾಡಿದರೆ ಒಳಿತು: ಕಳೆದ 20 ವರ್ಷಗಳಿಂದ ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ತಯಾರಿಕೆಗೆ ಗುಣಮಟ್ಟದ ತುಪ್ಪ ಸರಬರಾಜು ಮಾಡಿದ್ದು, ಇದರಿಂದ ಲಡ್ಡುವಿನ ಸ್ವಾದ ಮತ್ತು ರುಚಿಯೂ ಅತ್ಯುತ್ತಮವಾಗಿತ್ತು. ಆದರೆ, ಇಲ್ಲಿ ಉತ್ಪಾದನೆ ಮಾಡುವ ಗುಣಮಟ್ಟದ ತುಪ್ಪವನ್ನು ಸ್ಪರ್ಧಾತ್ಮಕ ಬೆಲೆಯ ನಿಟ್ಟಿನಲ್ಲಿ ದೇವಸ್ಥಾನದ ಟೆಂಡರ್‌ನಲ್ಲಿ ಭಾಗವಹಿಸಿ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಒಂದು ಸುತ್ತಿನ ಸಭೆಯನ್ನು ನಡೆಸಿ, ಗುಣಮಟ್ಟದ ತುಪ್ಪವನ್ನು ಖರೀದಿಗೆ ಒಪ್ಪಿದಲ್ಲಿ ನಾವು ತುಪ್ಪ ಸರಬರಾಜು ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಇಲ್ಲಿದೆ ನೋಡಿ ಕೆಎಂಎಫ್ ಬರೆದ ಪತ್ರ: