ದೇವರ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿ, ಹರಿದ ಜೀನ್ಸ್, ಸ್ಕರ್ಟ್ ಸೇರಿ ಹಲವು ಉಡುಪುಗಳಿಗೆ ನಿಷೇಧ!
ಈಗಾಗಲೇ ಹಲವು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಇದೀಗ ಖಾತು ಶ್ಯಾಮ ದೇವಸ್ಥಾನದೊಳಗೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಈ ಕುರಿತು ದೊಡ್ಡ ಬ್ಯಾನರ್ ಹಾಕಲಾಗಿದೆ. ಸ್ಕರ್ಟ್, ಟಿ ಶರ್ಟ್, ಹರಿದ ಜೀನ್ಸ್ ಸೇರಿದಂತೆ ಹಲವು ಉಡುಪುಗಳನ್ನು ನಿಷೇಧಿಸಿದೆ.
ಲಖನೌ(ಜು.01) ಸಭ್ಯತೆ ಕಾಪಾಡಲು ಹಲವು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿದೆ. ಇದೀಗ ಉತ್ತರ ಪ್ರದೇಶದ ಜನಪ್ರಿಯ ಖಾತು ಶ್ಯಾಮ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಈ ಕುರಿತು ಅತೀ ದೊಡ್ಡ ಬ್ಯಾನರನ್ನು ದೇವಸ್ಥಾನದ ಆವರಣದಲ್ಲಿ ಹಾಕಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆ ಹಾಗೂ ಸಭ್ಯ ಉಡುಗೆಯಲ್ಲಿ ದೇವರ ದರ್ಶನ ಮಾಡಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.ಎಲ್ಲಾ ಪುರುಷ ಹಾಗೂ ಮಹಿಳೆಯರು ಡೀಸೆಂಟ್ ಉಡುಪಿನಲ್ಲಿ ಮಾತ್ರ ದೇವಸ್ಥಾನ ಪ್ರವೇಶಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸೂಕ್ತ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನ ಒಳ ಪ್ರವೇಶಿಸಬೇಡಿ. ಜೀನ್ಸ್, ಶಾರ್ಟ್ಸ್, ತ್ರಿಫೋರ್ಥ್, ಹಾಫ್ ಪ್ಯಾಂಟ್ಸ್, ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸ್ಯೂಟ್ , ಹರಿದ ಜೀನ್ಸ್ ಸೇರಿದಂತೆ ಸಭ್ಯತೆ ಮೀರಿದ ಯಾವುದೇ ಉಡುಗೆ ಹಾಕಿದರೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದ ಆಡಳಿತ ಮಂಡಳಿ ಹೇಳಿದೆ.
18 ಪ್ರಸಿದ್ಧ ದೇವಸ್ಥಾನದಲ್ಲಿ ಡ್ರೆಸ್ ಕೋಡ್; ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ನಿಷೇಧ!
ಹಪುರದಲ್ಲಿರುವ ಖಾತು ಶ್ಯಾಮ್ ದೇವಸ್ಥಾನ ಉತ್ತರಖಂಡದ ಮಹಾನಿರ್ವಾನಿ ಅಖರ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿದೆ. ಅಖರ ದೇವಸ್ಥಾನದ ಅಡಿಯಲ್ಲಿ ಅತ್ಯಂತ ಪ್ರಸಿದ್ಧ 3 ದೇವಸ್ಥಾನಗಳಿವೆ. ಇದೀಗ ಈ ಮೂರು ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನ ಬೇಕಾಬಿಟ್ಟಿ ಬಂದು ನಿಮ್ಮಿಷ್ಟದಂತೆ ಇರುವ ಸ್ಥಳವಲ್ಲ. ಇದು ಭಕ್ತಿ ಹಾಗೂ ಶ್ರದ್ಧೆಯ ಕೇಂದ್ರ. ನಿಮ್ಮ ಉಡುಗೆ ತೊಡುಗೆಗಳು ಪ್ರದರ್ಶಿಸಲು ಹಲವು ಸಾರ್ವಜನಿಕ ಸ್ಥಳಗಳಿವೆ. ದೇವಸ್ಥಾದೊಳಗೆ ರೀತಿ, ನೀತಿ, ಸಂಪ್ರದಾಯ, ಆಚಾರ ವಿಚಾರಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಭಕ್ತಿಯ ಕೇಂದ್ರವಾಗಿದೆ. ಹೀಗಾಗಿ ಇಲ್ಲಿ ಶ್ರದ್ಧೆ ಹಾಗೂ ಭಕ್ತಿಗೆ ಭಂಗ ತರುವ ಹಾಗೂ ಸಂಪ್ರದಾಯಕ್ಕೆ ವಿರುದ್ಧವಾಗಿರುವ ಯಾವುದೇ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಭಕ್ತರು ಮನಗಂಡು ಆಯಾ ದೇವಸ್ಥಾನದ ಆಚಾರ, ಸಂಪ್ರದಾಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು, ಕಷ್ಟಗಳನ್ನು ನಿವಾರಿಸಲು ಆಗಮಿಸುತ್ತಾರೆ. ಇಲ್ಲಿ ಯಾವುದೇ ಭಕ್ತರ ಭಾವನೆಗೆ, ಭಕ್ತಿಗೆ ಧಕ್ಕೆಯಾಗಬಾರದು. ಪೂಜಾ ಸ್ಥಳದ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ಭಕ್ತರ ಮೇಲಿದೆ ಎಂದು ಆಡಳಿತ ಮಂಡಳಿ ಹೇಳಿದೆ.ಇತ್ತೀಚೆಗೆ ದೇವಸ್ಥಾನಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಿದೆ. ಆದರೆ ಸೂಕ್ತ ರೀತಿಯಲ್ಲಿ ಆಗಮಿಸುತ್ತಿಲ್ಲ ಅನ್ನೋ ಬೇಸರವಿದೆ. ಯುವ ಸಮೂಹ ಭಾರತದ ಅಸ್ಮಿತೆ ಕಾಪಾಡಿಕೊಳ್ಳಬೇಕು ಎಂದು ಮಹಾನಿರ್ವಾನಿ ಅಖರ ಮಂಡಳಿ ಮನವಿ ಮಾಡಿದೆ.
ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿ: ಲೆಗ್ಗಿಂಗ್ಸ್ , ಟೀಶರ್ಟ್, ಜೀನ್ಸ್ ನಿಷೇಧ
ಭಾರತದ ಹಲವು ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಕಟ್ಟು ನಿಟ್ಟಾಗಿ ಪಾಲನೆ ಕೂಡ ಮಾಡಲಾಗುತ್ತಿದೆ. ಇನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕು ಅನ್ನೋ ಆಗ್ರಹ ಹಿಂದಿನಿಂದಲೂ ಕೇಳಿಬರುತ್ತಿದೆ.