ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ದೊಡ್ಡ ತಲೆನೋವಾಗಿದ್ದ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದಾನೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಸುದ್ದಿ ಬಂದಿಲ್ಲ.
ನವದೆಹಲಿ (ಜು.5): ಭಾರತದಲ್ಲಿಯೇ ಕುಳಿತು ದೇಶಕ್ಕೆ ತಲೆನೋವು ತಂದಿಡುವ ವಿರೋಧಿಗಳನ್ನು ಕೇಂದ್ರ ಸರ್ಕಾರ ಮಟ್ಟಹಾಕುತ್ತಿದೆಯೇ ಎನ್ನುವ ಅನುಮಾನ ಜೋರಾಗಿದೆ. ಕಳೆದ ಎರಡೂವರೆಗೆ ತಿಂಗಳಲ್ಲಿ ಮೂರು ಖಲಿಸ್ತಾನಿ ನಾಯಕರು ಅನುಮಾನಾಸ್ಪದ ರೀತಿಯಲ್ಲಿ ಸಾವು ಕಂಡಿದ್ದೇ ಇದಕ್ಕೆ ಸಾಕ್ಷಿಯಾಗಿತ್ತು. ಈ ನಡುವೆ ಅಮೆರಿಕದಲ್ಲಿ ಕುಳಿತು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಸಂಸ್ಥಾಪಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಅಮೆರಿಕದ ರಾಷ್ಟ್ರೀಯ 101ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆತ ಸಾವು ಕಂಡಿದ್ದಾನೆ ಎನ್ನಲಾಗಿದೆ. ಆದರೆ, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ವೈರಲ್ ಆಗಿದೆ. ಈ ಮಾಹಿತಿಯನ್ನು ಮೂಲಗಳಿಂದ ಸ್ವೀಕರಿಸಲಾಗಿದ್ದರೂ, ಯಾವುದೇ ಕಡೆಯಿಂದ ಔಪಚಾರಿಕವಾಗಿ ದೃಢೀಕರಿಸಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ನಾಯಕರುಗಳು ಅನುಮಾನಾಸ್ಪದವಾಗಿ ಸಾವು ಕಂಡ ಬೆನ್ನಲ್ಲಿಯೇ ಪನ್ನುನ್ ಭೂಗತನಾಗಿದ್ದ.
ಪನ್ನುನ್ ತಾನಿದ್ದ ಸ್ಥಳದ ಮಾಹಿತಿ ಸಿಗಬಾರದು ಎಂದು ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿದ್ದ. ಪಾಕಿಸ್ತಾನದಲ್ಲಿ ಪರಮ್‌ಜಿತ್ ಸಿಂಗ್ ಪಂಜ್ವಾಡ್ ಮತ್ತು ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಯುಕೆಯಲ್ಲಿ ಅವತಾರ್ ಸಿಂಗ್ ಖಾಂಡಾ ಸಾವು ಕಂಡ ಬಳಿಕ, ಪನ್ನುನ್‌ಗೆ ಜೀವ ಭಯ ಕಾಡಿತ್ತು ಎನ್ನಲಾಗಿದೆ.
ಅಮೆರಿಕದಲ್ಲಿ ಕುಳಿತು ಬೆದರಿಕೆ: ಪನ್ನುನ್ ಮೂಲತಃ ಅಮೃತಸರದ ಖಾನ್ಕೋಟ್ ಗ್ರಾಮದ ನಿವಾಸಿ. ಚಿಕ್ಕ ವಯಸ್ಸಿನಲ್ಲಿಯೇ ಆತ ವಿದೇಶಕ್ಕೆ ಹೋಗಿದ್ದ. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಆಜ್ಞೆಯ ಮೇರೆಗೆ, ಅದು ಖಲಿಸ್ತಾನಿ ಯೋಜನೆಗಳನ್ನು ಪೂರೈಸುವಲ್ಲಿ ತೊಡಗಿದ್ದ ಎನ್ನಲಾಗಿದೆ. ಅಮೆರಿಕದ ಹೊರತಾಗಿ, ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ತಮ್ಮ ಸಂಘಟನೆಯ ಮೂಲಕ ಭಾರತ ವಿರೋಧಿ ಪ್ರಚಾರವನ್ನು ಮುಂದುವರೆಸಿದರು. ಖಲಿಸ್ತಾನ್ ಬೇಡಿಕೆಯ ಹೆಸರಿನಲ್ಲಿ ವಿಡಿಯೊಗಳನ್ನು ಬಿಡುಗಡೆ ಮಾಡುವ ಮೂಲಕ ಪಂಜಾಬ್ ನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದ. ಮಾನಹಾನಿ ಮಾಡುವ ಮೂಲಕ ಭಾರತೀಯ ಏಜೆನ್ಸಿಗಳ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದ. ಇತ್ತೀಚೆಗೆ, ಖಲಿಸ್ತಾನ್ ಬೆಂಬಲಿಗರ ಹತ್ಯೆಯ ನಂತರ, ಅವರು ಕೆನಡಾ ಮತ್ತು ಅಮೆರಿಕದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ದೂಷಿಸುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು. ಇದು ಆತನ ಕೊನೆಯ ಬೆದರಿಕೆ ವಿಡಿಯೋ ಆಗಿತ್ತು.
ಮೋದಿ ಅಮೆರಿಕ ಭೇಟಿ ಬೆನ್ನಲ್ಲೇ, ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ನಾಪತ್ತೆ?
ಪನ್ನುನ್ ಯುಕೆ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಪರಮ್‌ಜಿತ್ ಸಿಂಗ್ ಪಮ್ಮಾ, ಕೆನಡಾ ಮೂಲದ ಕೆಟಿಎಫ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್‌ನ ಮಲ್ಕಿತ್ ಸಿಂಗ್ ಫೌಜಿ ಅವರೊಂದಿಗೆ ಸಂಪರ್ಕದಲ್ಲಿದ್ದ. ಅವರು ಪ್ರತ್ಯೇಕ ಖಲಿಸ್ತಾನ್ ದೇಶಕ್ಕಾಗಿ ಹೋರಾಡಲು ಪಂಜಾಬ್‌ನ ದರೋಡೆಕೋರರು ಮತ್ತು ಯುವಕರನ್ನು ಪ್ರಚೋದಿಸುತ್ತಿದ್ದರು. ಈತನನ್ನು ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿತ್ತು.
ಭಾರತ ದ್ರೋಹಿಗಳ ನಿಗೂಢ ಸಾವು: ದೇಶದ ವಿರುದ್ಧ ಕತ್ತಿ ಮಸೆದವರು ಇದ್ದಕ್ಕಿದ್ದಂತೆ ಹೆಣವಾದರು !
ಗುರುಪತ್ವಂತ್ ಸಿಂಗ್ ಪನ್ನುನ್ ಅವರು 'ಪಂಜಾಬ್ ರೆಫರೆಂಡಮ್ 2020' ಹೆಸರಿನಲ್ಲಿ ಅಮೆರಿಕದಲ್ಲಿ ದೀರ್ಘಕಾಲ ಕುಳಿತು ಖಲಿಸ್ತಾನಿ ಚಳವಳಿಯನ್ನು ನಡೆಸುತ್ತಿದ್ದರು. ಇಲ್ಲಿ ಅವರು ಸಿಖ್ಖರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದ. ಸಿಖ್ಖರನ್ನು ಖಲಿಸ್ತಾನ್ ಅಭಿಯಾನದೊಂದಿಗೆ ಸಂಪರ್ಕಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದ. ಖಲಿಸ್ತಾನಿ ಘೋಷಣೆಗಳನ್ನು ಬರೆಯಲು ಪನ್ನುನ್ ಹಣ ನೀಡುತ್ತಿದ್ದರು. ಪನ್ನುವಿನ ಇಚ್ಛೆಯ ಮೇರೆಗೆ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಖಲಿಸ್ತಾನಿ ಘೋಷಣೆಗಳನ್ನು ಬರೆಯುವ ಮೂಲಕ ವಾತಾವರಣವನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿತ್ತು.
