ಕರ್ನಾಟಕ ಹಾಗೂ ಕೇರಳದ ಸಿಂಡಿಕೇಟ್‌ ಮೂಲಕ ಹಣ ಸಂಗ್ರಹಿಸುತ್ತಿದ್ದ ಪಿಎಫ್‌ಐ ಉಗ್ರ ಬಂಧನ

ಕರ್ನಾಟಕ ಹಾಗೂ ಕೇರಳದಲ್ಲಿರುವ ಸಿಂಡಿಕೇಟ್‌ಗಳ ಮೂಲಕ ದುಬೈನಿಂದ ಬರುತ್ತಿದ್ದ ಅಕ್ರಮ ಹಣವನ್ನು ಭಾರತದ ಪಿಎಫ್‌ಐ ಕೇಡರ್‌ಗಳಿಗೆ ಉಗ್ರ ಚಟುವಟಿಕೆಗಾಗಿ ವಿತರಿಸುತ್ತಿದ್ದ ಮೊಹಮ್ಮದ್‌ ಸಜ್ಜಾದ್‌ ಆಲಂ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

Key Accused in Phulwarisharif PFI Case Arrested at Delhi Airport gvd

ನವದೆಹಲಿ (ಜ.06): ಕರ್ನಾಟಕ ಹಾಗೂ ಕೇರಳದಲ್ಲಿರುವ ಸಿಂಡಿಕೇಟ್‌ಗಳ ಮೂಲಕ ದುಬೈನಿಂದ ಬರುತ್ತಿದ್ದ ಅಕ್ರಮ ಹಣವನ್ನು ಭಾರತದ ಪಿಎಫ್‌ಐ ಕೇಡರ್‌ಗಳಿಗೆ ಉಗ್ರ ಚಟುವಟಿಕೆಗಾಗಿ ವಿತರಿಸುತ್ತಿದ್ದ ಮೊಹಮ್ಮದ್‌ ಸಜ್ಜಾದ್‌ ಆಲಂ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಬಿಹಾರದ ಚಂಪಾರಣ್‌ ಮೂಲದವನಾದ ಆಲಂ, ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾಧಿಕಾರಿಗಳ ತಂಡ ಬಂಧಿಸಿದೆ. ನಿಷೇಧಿತ ಪಿಎಫ್‌ಐ ಸಂಘಟನೆಗೆ ದುಬೈನಿಂದ ಹಣ ಸರಬರಾಜು ಮಾಡುತ್ತಿದ್ದ ಆಲಂ ಮೇಲೆ ಈ ಮೊದಲೇ ಅರೆಸ್ಟ್‌ ವಾರಂಟ್‌ ಹಾಗೂ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

ಪಿಎಫ್‌ಐನ ಈ ಕೇಡರ್‌ ಸಮಾಜದ ವಿವಿಧ ಧರ್ಮ ಹಾಗೂ ಗುಂಪುಗಳ ನಡುವೆ ದ್ವೇಷ ಹಾಗೂ ಭಯದ ವಾತಾವರಣ ಸೃಷ್ಟಿಸಿ ಶಾಂತಿ, ಸಾಮರಸ್ಯ ಕದಡುತ್ತಿತ್ತು. ಜತೆಗೆ, 2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿಸಲು ಕ್ರಿಮಿನಲ್‌ ಶಕ್ತಿಗಳನ್ನು ಬಳಸಿ ತನ್ನ ಸಿದ್ಧಾಂತಗಳನ್ನು ಹರಡುತ್ತಿತ್ತು. ಇದರ ಮೇಲೆ 2022ರ ಜುಲೈನಲ್ಲೇ ಬಿಹಾರದ ಫೂಲ್ವಾರಿ ಶರೀಫ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ತನ್ನ ಕೈಗೆತ್ತಿಕೊಂಡ ಎನ್‌ಐಎ 17 ಜನರ ವಿರುದ್ಧ ಚಾರ್ಜ್‌ಶೀಟ್‌ ಸಿದ್ಧಪಡಿಸಿದ್ದು, ಬಂಧಿತ ಆಲಂ 18ನೆಯವನು.

ಉಗ್ರ ಜಿಹಾದಿಗೆ ಪಿಎಫ್‌ಐ ಸಂಚು: ಇ.ಡಿ. ಸ್ಫೋಟಕ ಮಾಹಿತಿ

ಪಿಎಫ್‌ಐ ಕಾರ್ಯಕರ್ತನ ಹಣ ಬಿಡುಗಡೆಗೆ ಕೋರ್ಟ್‌ ನಕಾರ: ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ ಎನ್ನಲಾದ ವ್ಯಕ್ತಿಯ ಮನೆಯಿಂದ ನಗರದ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು 1437600 ರು. ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಕ್ರಿಮಿನಲ್ ‌ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಅರ್ಜಿದಾರರಿಗೆ 10 ಸಾವಿರ ರು. ದಂಡ ವಿಧಿಸಿದೆ. 

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶೇಕ್‌ ಇಜಾಜ್‌ ಅಲಿ ಅವರ ತಂದೆ ಕಲಬುರಗಿಯ ಶೇಕ್‌ ಸಾದಿಕ್‌ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌, ಆರೋಪಿ ಶೇಕ್‌ ಇಜಾಜ್‌ ಅಲಿ ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಉಗ್ರ ಚಟುವಟಿಕೆಗೆ ಬಳಸಲು ವಿವಿಧ ಮೂಲದಿಂದ 143760 ಹಣ ಸಂಗ್ರಹಿಸಿದ್ದಾನೆ. ಈ ಅಂಶ ಸಾಬೀತುಪಡಿಸಲು ತನಿಖಾಧಿಕಾರಿಗಳ ಬಳಿ ಸಾಕ್ಷ್ಯವಿದೆ. ಒಂದೊಮ್ಮೆ ಆರೋಪಿಯ ತಂದೆಯ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ, ಆರೋಪಿಯ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಸ್ತುಪಡಿಸಲು ಅಡ್ಡಿ ಉಂಟು ಮಾಡಿದಂತಾಗುತ್ತದೆ ಎಂದು ವಾದಿಸಿದ್ದರು. 

ಕಾಂಗ್ರೆಸ್‌ಗೆ ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿ ಎಸ್‌ಡಿಪಿಐ ಬೆಂಬಲ!

ಹಾಗೆಯೇ, ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ತೀರ್ಮಾನ ಮಾಡುವ ಮುನ್ನವೇ ಇಡೀ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿಲ್ಲ ಎಂಬುದನ್ನೂ ಹೈಕೋರ್ಟ್‌ ಈಗಲೇ ನಿರ್ಧರಿಸಿದಂತಾಗುತ್ತದೆ. ಪೊಲೀಸರು ಜಪ್ತಿ ಮಾಡಿರುವ ಹಣ ಹೂ-ಹಣ್ಣು ಮಾರಾಟ ಮಾಡಿದ ಹಣ ಎಂದು ಆರೋಪಿ ತಂದೆ, ಕೆಲ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಅದರಲ್ಲಿ ಹಣ ಸಂಪಾದಿಸಿರುವ ಸಮಯ ಹಾಗೂ ದಿನಾಂಕದ ವಿವರ ಒದಗಿಸಿಲ್ಲ. ಹೂ-ಹಣ್ಣು ಮಾರಾಟ ಮಾಡಿ ಇಷ್ಟು ಹಣ ಸಂಪಾದಿಸಿರುವುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಆರೋಪಿ ಕೃತ್ಯವನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಸಾಬೀತುಪಡಿಸಲಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

Latest Videos
Follow Us:
Download App:
  • android
  • ios