ಭಾರತದಲ್ಲಿ ಮಂಕಿಪಾಕ್ಸ್‌ಗೆ ಮೊದಲ ಬಲಿ, ಕೇರಳದಲ್ಲಿ ಹೈಅಲರ್ಟ್ ಘೋಷಣೆ !
ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣ ಖಚಿತವಾಗಿದೆ. ಆದರೆ ಇದೇ ಮೊದಲ ಬಾರಿಗೆ ಮಂಕಿಪಾಕ್ಸ್ ಸೋಂಕಿತ ಮೃತಪಟ್ಟ ಘಟನೆ ವರದಿಯಾಗಿದೆ. ಯುಎಇನಿಂದ ಕೇರಳಕ್ಕೆ ಆಗಮಿಸಿದ 22ರ ಹರೆಯದ ಯುವಕನಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಕೇರಳ ಸರ್ಕಾರ ತನಿಖೆಗೆ ಆದೇಶಿಸಿದೆ.
ಕೇರಳ(ಜು.31): ಭಾರತದಲ್ಲಿ ಮಂಕಿಪಾಕ್ಸ್ ಆತಂಕ ಹೆಚ್ಚಾಗುತ್ತಿದೆ. 4 ಪ್ರಕರಣ ದೃಢಪಟ್ಟಿದ್ದರೆ, ಮಂಕಿಪಾಕ್ಸ್ ರೋಗಲಕ್ಷಣಗಳಿಂದ ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಆತಂಕ ಎದುರಾಗಿದೆ. ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯಾಗಿದೆ. ಕೇರಳದ 22ರ ಹರೆಯದ ಯುವಕ ತ್ರಿಶೂರು ಜಿಲ್ಲೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯುಎಇನಲ್ಲಿ ಉದ್ಯೋಗದಲ್ಲಿದ್ದ ಯುವಕ ಜ್ವರ ಹಾಗೂ ಮಂಕಿಪಾಕ್ಸ್ ರೋಗಲಕ್ಷಣಗಳಿಂದ ಯುಎಐ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ್ದ. ಈತನ ವರದಿ ಪಾಸಿಟೀವ್ ಆಗಿತ್ತು. ಬಳಿಕ ದುಬೈನಿಂದ ಕೇರಳಕ್ಕೆ ಆಗಮಿಸಿದ ಯುವಕ ತೀವ್ರ ಆಸ್ವಸ್ಥಗೊಂಡಿದ್ದ. ಹೀಗಾಗಿ ತ್ರಿಶೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 21ಕ್ಕೆ ಆಸ್ಪತ್ರೆ ದಾಖಲಾಗಿದ್ದ ಯುವಕ ಇಂದು(ಜು.31) ಮೃತಪಟ್ಟಿದ್ದಾನೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೇರಳದ ತ್ರಿಶೂರ್‌ನಲ್ಲಿನ ಮಂಕಿಪಾಕ್ಸ್ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ತ್ರಿಶೂರು ಯುವಕ ಅರಬ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿದೆ. ಈ ಕುರಿತು ಪರೀಕ್ಷೆಯಲ್ಲಿ ಪಾಸಿಟೀವ್ ಪತ್ತೆಯಾಗಿದೆ. ಯುಎಇನಿಂದ ಭಾರತಕ್ಕೆ ಮರಳಿದ ಯುವಕ ಆಸ್ಪತ್ರೆ ದಾಖಲಾಗಿದ್ದಾನೆ. ಈತನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಇರಲಿಲ್ಲ. ಇಷ್ಟೇ ಅಲ್ಲ ಯುವಕ ಹಾಗೂ ಆತನ ಕುಟುಂಬಸ್ಥರು ಮಂಕಿಪಾಕ್ಸ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಯುವಕನ ಮಾದರಿ ಸಂಗ್ರಹಿಸಿ ವಿರೋಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. 22ರ ಹರೆಯದ ಯುವಕನಲ್ಲಿ ಇತರ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಹೀಗಾಗಿ ಈ ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಶಂಕೆ, 8 ವರ್ಷದ ಬಾಲಕ ಆಸ್ಪತ್ರೆ ದಾಖಲು!
ಜುಲೈ 21ಕ್ಕೆ ಯುಎಇನಿಂದ ಯುವಕ ಕೇರಳಕ್ಕೆ ಮರಳಿದ್ದಾನೆ. ವಿದೇಶದಲ್ಲೇ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದ್ದರೂ ಭಾರತದಲ್ಲಿ ಆಸ್ಪತ್ರೆ ದಾಖಲಾಗಲು ವಿಳಂಬ ಮಾಡಲಾಗಿದೆ. ಇಷ್ಟೇ ಅಲ್ಲ ಆಸ್ಪತ್ರೆ ದಾಖಲಾದ ಬಳಿಕ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ. ಶನಿವಾರ(ಜು.30) ಯುವಕನ ಕುಟುಂಬಸ್ಥರು ವಿದೇಶದಲ್ಲಿ ಮಂಕಿಪಾಕ್ಸ್ ಪಾಸಿಟೀವ್ ವರದಿಯನ್ನು ಆಸ್ಪತ್ರೆಗೆ ನೀಡಿದ್ದಾರೆ. ಯುವನ ಸಾವು ಯಾವ ಕಾರಣಕ್ಕೆ ಆಗಿದೆ ಅನ್ನೋದು ತನಿಖೆಯಿಂದ ಬಹಿರಂಗವಾಗಲಿದೆ. ಕಾರಣ ಮಂಕಿಪಾಕ್ಸ್ ಪ್ರಕರಣದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.