ನವದೆಹಲಿ (ಜೂ.  03) ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಯ(sustainable development goals) 2020-21ನೇ ಸಾಲಿನಲ್ಲಿ ಕೇರಳ ಅಗ್ರ ಸ್ಥಾನ ಪಡೆದುಕೊಂಡಿದೆ. ನೀತಿ ಆಯೋಗವು ಗುರುವಾರ ಸುಸ್ಥಿರ ಅಭಿವೃದ್ಧಿ ಗುರಿ ವರದಿ ಬಿಡುಗಡೆ  ಮಾಡಿದೆ. , ಕೇರಳ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದರೆ  ಬಿಹಾರಕ್ಕೆ ಕೊನೆ ಸ್ಥಾನ.

ಭಾರತದ ಎಸ್‌ಜಿಡಿ ಸೂಚ್ಯಂಕದ ಮೂರನೇ ಆವೃತ್ತಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್  ಬಿಡುಗಡೆ ಮಾಡಿದರು. ಸಾಮಾಜಿಕ, ಆರ್ಥಿಕ, ಪರಿಸರ ವಿಷಯಗಳ ಮಾನದಂಡದಲ್ಲಿ ರಾಜ್ಯಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.  ಈ ಮೌಲ್ಯಮಾಪನದಲ್ಲಿ ಕೇರಳ 75 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ಕೇಂದ್ರಕ್ಕೆ ನೀತಿ ಆಯೋಗ ಸಲ್ಲಿಸಿದ ಹನ್ನೆರಡು ಅಂಶದ ಕಾರ್ಯಕ್ರಮ

ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು 74 ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನ  ಹಂಚಿಕೊಂಡಿವೆ. ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅತಿ ಕಳಪೆ  ಸಾಧನೆ ಮಾಡಿವೆ. 

ಕೇಂದ್ರಾಡಳಿತ ಪ್ರದೇಶ ವಿಭಾಗದಲ್ಲಿ  ಚಂಡೀಗಢ 79 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ದೆಹಲಿ 68 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2019ರಿಂದ ಸುಧಾರಣಾ ದೃಷ್ಟಿಯಲ್ಲಿ ಮಿಝೋರಾಂ, ಹರಿಯಾಣ, ಉತ್ತರಾಖಂಡ ಮುನ್ನಡೆ ಸಾಧಿಸಿವೆ. 

2018 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಸೂಚ್ಯಂಕ ರಾಜ್ಯಗಳ ಅಭಿವೃದ್ಧಿಯ ಮಾನದಂಡ ಎಂದು ಪರಿಗಣಿಸಲಾಗಿದೆ. ಮಿಜೋರಾಂ, ಹರಿಯಾಣ ಮತ್ತು ಉತ್ತರಾಖಂಡ  ವೇಗವಾಗಿ ಮುನ್ನಡೆ ಸಾಧಿಸುತ್ತಿರುವ ರಾಜ್ಯಗಳು ಎಂಬ ಗೌರವಕ್ಕೆ ಪಾತ್ರವಾಗಿವೆ.

ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿವೆ. ವೃತ್ತಿಪರ, ತಾಂತ್ರಿಕ ಘಟಕ ಸ್ಥಾಪನೆ ಮಾಡಿವೆ. ಆಕ್ಷನ್ ಪ್ಲಾನ್ ಅನುಷ್ಠಾನ ಮಾಡುತ್ತಿವೆ ಎಂದು ನೀತಿ ಆಯೋಗ ಹೇಳಿದೆ. ಅಸ್ಸಾಂ, ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ಕರ್ನಾಟಕ, ತೆಲಂಗಾಣ ಮತ್ತು ಉತ್ತರಾಖಂಡ   ಉತ್ತಮ ಹೆಜ್ಜೆ ಇಡುತ್ತಿವೆ ಎಂದು ನೀತಿ ಆಯೋಗ ಬಣ್ಣಿಸಿದೆ.