ತ್ರಿಶೂರ್(ಸೆ.26)‌: ಬಹುಶಃ ದೇಶದಲ್ಲೇ ಮೊದಲು ಎಂದು ಹೇಳಲಾದ ವಿದ್ಯಮಾನವೊಂದರಲ್ಲಿ ಕೇರಳದ ತ್ರಿಶೂರ್‌ನ ಯುವಕನೊಬ್ಬನಿಗೆ ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಕೊರೋನಾ ವೈರಸ್‌ ತಗಲಿದೆ. ಮೂರೂ ಬಾರಿಯೂ ಈತ ಕೊರೋನಾದಿಂದ ಗುಣಮುಖನಾಗಿದ್ದಾನೆ.

ತ್ರಿಶೂರ್‌ ಜಿಲ್ಲೆಯ ಪೊನ್ನುಕ್ಕರ ಎಂಬ ಊರಿನ ಪಾಲವೇಲಿ ಸೇವಿಯೋ ಜೋಸೆಫ್‌ (38) ಎಂಬಾತನೇ ಮೂರು ಬಾರಿ ಕೊರೋನಾ ತಗಲಿಸಿಕೊಂಡ ಯುವಕ. ಈತ ಒಮಾನ್‌ನಲ್ಲಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯೊಂದರಲ್ಲಿ ಸೂಪರ್‌ವೈಸರ್‌ ಆಗಿದ್ದ. ಮಾಚ್‌ರ್‍ ತಿಂಗಳಲ್ಲಿ ಅಲ್ಲಿದ್ದಾಗ ಮೊದಲ ಬಾರಿ ಕೊರೋನಾ ತಗಲಿತ್ತು. ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾಜ್‌ರ್‍ ಆಗಿದ್ದ. ನಂತರ ಜೂನ್‌ನಲ್ಲಿ ಕೇರಳಕ್ಕೆ ಆಗಮಿಸಿದ್ದ ಈತನಿಗೆ ಜುಲೈನಲ್ಲಿ ಮತ್ತೆ ವೈರಸ್‌ ತಗಲಿತ್ತು. ತ್ರಿಶೂರ್‌ ಆಸ್ಪತ್ರೆಯಲ್ಲಿ 20 ದಿನ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ನಂತರ ಮತ್ತೆ ಸೆ.5ರಂದು ಕೊರೋನಾ ತಗಲಿ, ಚಿಕಿತ್ಸೆ ಪಡೆದು ಸೆ.11ರಂದು ಡಿಸ್‌ಚಾಜ್‌ರ್‍ ಆಗಿದ್ದಾನೆ. ಮೂರೂ ಸಲವೂ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲೇ ಈತನಿಗೆ ಕೊರೋನಾ ದೃಢವಾಗಿದೆ ಮತ್ತು ನಂತರ ನೆಗೆಟಿವ್‌ ಬಂದಮೇಲೇ ಡಿಸ್‌ಚಾಜ್‌ರ್‍ ಆಗಿದ್ದಾನೆ.

ಈತನ ಪ್ರಕರಣ ಕೇರಳದ ಆರೋಗ್ಯ ಇಲಾಖೆಗೆ ಅಚ್ಚರಿ ಮೂಡಿಸಿದ್ದು, ತನಿಖೆಗೆ ಆದೇಶಿಸಲಾಗಿದೆ. ವೈರಾಲಜಿ ತಜ್ಞರು ಪುನಃಪುನಃ ಹೀಗೆ ಸೋಂಕು ತಗಲುವ ಸಾಧ್ಯತೆಯಿಲ್ಲ, ಈತನ ಪರೀಕ್ಷಾ ವರದಿಗಳೇ ಸುಳ್ಳಾಗಿರಬಹುದು ಎಂದು ಹೇಳಿದ್ದಾರೆ.