ಕೇರಳದ ಕೊಲ್ಲಂನಲ್ಲಿ, ಅಕ್ರಮ ಸಂಬಂಧದ ಬಗ್ಗೆ ವಿದೇಶದಲ್ಲಿದ್ದ ಮಗಳಿಗೆ ತಿಳಿಸಿದ್ದಕ್ಕೆ ಅಳಿಯನೇ ವೃದ್ಧ ಅತ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವು ದಿನಗಳಿಂದ ನಡೆಯುತ್ತಿದ್ದ ಈ ಕಿರುಕುಳವನ್ನು ವೃದ್ಧೆ ಸಂಬಂಧಿಕರಿಗೆ ತಿಳಿಸಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲ್ಲಂ, ಕೇರಳ (ಜೂ.26): ಅಳಿಯನ ಅಕ್ರಮ ಸಂಬಂಧ ಹಾಗೂ ದುರ್ನಡತೆಯ ಬಗ್ಗೆ ವಿದೇಶದಲ್ಲಿದ್ದ ಮಗಳಿಗೆ ಫೋನ್ ಮಾಡಿ ತಿಳಿಸಿದ ಏಕೈಕ ಕಾರಣಕ್ಕಾಗಿ, ವೃದ್ಧ ಅತ್ತೆಯ ಮೇಲೆಯೇ ಅಳಿಯ ಭೀಕರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಅತ್ಯಂತ ವಿಕೃತ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕುಂದರ ಎಂಬಲ್ಲಿ ಬೆಳಕಿಗೆ ಬಂದಿದೆ. ಮನೆಯ ಅಂಗಳದಲ್ಲಿ ಕಾಂಡೋಮ್ ಪತ್ತೆಯಾದ ವಿಷಯವನ್ನು ವೃದ್ಧೆ ತನ್ನ ಮಗಳಿಗೆ ತಿಳಿಸಿದ್ದೇ ಈ ಇಡೀ ಕ್ರೂರ ಘಟನೆಗೆ ಕಾರಣವಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯಾಗಿರುವ ಆಕೆಯ ಅಳಿಯ ಶಾನ್ ನಡತೆ ಸರಿಯಿರಲಿಲ್ಲ. ಇತ್ತೀಚೆಗೆ ಮನೆಯ ಅಂಗಳದಲ್ಲಿ ಕಾಂಡೋಮ್ ಬಿದ್ದಿರುವುದನ್ನು ಗಮನಿಸಿದ್ದ ವೃದ್ಧೆ, ಈ ಬಗ್ಗೆ ತಕ್ಷಣವೇ ವಿದೇಶದಲ್ಲಿದ್ದ ತನ್ನ ಮಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಇದರಿಂದ ತೀವ್ರವಾಗಿ ಕೆರಳಿದ್ದ ಅಳಿಯ, ಅತ್ತೆಯ ಮೇಲೆಯೇ ತೀವ್ರ ದ್ವೇಷ ಸಾಧಿಸಲು ಶುರು ಮಾಡಿದ್ದ. ಇದೇ ವೈರತ್ವದಲ್ಲಿ ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಅತ್ಯಂತ ಕ್ರೂರವಾಗಿ ರೇ* ಮಾಡಿದ್ದಾನೆ ಎನ್ನಲಾಗಿದೆ.
2025 ರಿಂದಲೇ ನಿರಂತರ ಕಿರುಕುಳ!
ಆರೋಪಿಯು ಕಳೆದ 2025 ರಿಂದಲೇ ಈ ವಯೋವೃದ್ಧೆಯ ಮೇಲೆ ನಿರಂತರವಾಗಿ ಇಂತಹ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಳಿಯನ ಅತಿರೇಕದ ವರ್ತನೆ ಹಾಗೂ ಪ್ರಾಣಭಯದ ಕಾರಣದಿಂದಾಗಿ ವೃದ್ಧೆಯು ಇಷ್ಟು ದಿನ ಈ ಭೀಕರ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒಳಗೊಳಗೇ ನರಳಿ, ಮೌನವಾಗಿದ್ದರು.
ಕೊನೆಗೂ ಧೈರ್ಯ ಮಾಡಿ ರಹಸ್ಯ ಬಿಚ್ಚಿಟ್ಟ ವೃದ್ಧೆ; ಆರೋಪಿ ಅರೆಸ್ಟ್!
ಅಳಿಯನ ದೌರ್ಜನ್ಯ ಮಿತಿಮೀರಿದಾಗ, ಕೊನೆಗೂ ಧೈರ್ಯ ಪ್ರದರ್ಶಿಸಿದ ವೃದ್ಧೆ ತನಗಾಗುತ್ತಿದ್ದ ಕ್ರೂರ ಕಿರುಕುಳದ ಬಗ್ಗೆ ತನ್ನ ಆಪ್ತ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಈ ಆಘಾತಕಾರಿ ರಹಸ್ಯ ಹೊರಬೀಳುತ್ತಿದ್ದಂತೆ ಮನೆಗೆ ಬಂದ ಕುಟುಂಬಸ್ಥರು ತಕ್ಷಣವೇ ಕುಂದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಾಮುಕ ಅಳಿಯನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ (ರಿಮಾಂಡ್) ಒಪ್ಪಿಸಲಾಗಿದೆ.
ಬಂಧಿತ ಆರೋಪಿಯು ಕೇವಲ ಕೌಟುಂಬಿಕ ದೌರ್ಜನ್ಯ ಮಾತ್ರವಲ್ಲದೆ, ಮಾದಕ ದ್ರವ್ಯ ಮಾರಾಟ ಸೇರಿದಂತೆ ಹಲವು ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈತನ ವಿರುದ್ಧ ಬೇರೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆ ಪೊಲೀಸರು ಈಗ ಆಳವಾದ ತನಿಖೆ ನಡೆಸುತ್ತಿದ್ದಾರೆ. ಈ ದಂಪತಿಗಳ ನಡುವೆ ಈಗಾಗಲೇ ಹಲವು ಕೌಟುಂಬಿಕ ಸಮಸ್ಯೆಗಳಿದ್ದವು ಎಂದೂ ತನಿಖೆಯಿಂದ ತಿಳಿದುಬಂದಿದೆ.


