ಕೊಚ್ಚಿಯ ಪ್ರಸಿದ್ಧ 'ಕಾಶಿ ಆರ್ಟ್ ಕೆಫೆ'ಯಲ್ಲಿ ಬೀಫ್ ನೀಡಲಾಗುತ್ತಿದೆ ಮತ್ತು ಜಿನ್ನಾ ಚಿತ್ರವಿದೆ ಎಂದು ಯುಪಿ ಮೂಲದ ವ್ಲಾಗರ್ ವಿಡಿಯೋ ಹಂಚಿಕೊಂಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಕೇರಳದಲ್ಲಿ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.

ಕೊಚ್ಚಿ (ಅ.26): ಕೇರಳದ ಸೌಂದರ್ಯ ನಗರಿ ಕೊಚ್ಚಿಯಲ್ಲಿರುವ ಸುಮಾರು ಮೂರು ದಶಕಗಳಷ್ಟು ಹಳೆಯ ಇತಿಹಾಸ ಹೊಂದಿರುವ ಪ್ರಸಿದ್ಧ 'ಕಾಶಿ ಆರ್ಟ್ ಕೆಫೆ'ಯ ಹೆಸರು, ಅದರ ಆಹಾರ ಮೆನ್ಯೂ ಹಾಗೂ ಅಲ್ಲಿನ ಗೋಡೆಯ ಮೇಲಿರುವ ಕಲಾಕೃತಿಯೊಂದು ದಿಢೀರನೇ ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಹಿಂದುಗಳ ಪವಿತ್ರ ನಗರಿ 'ಕಾಶಿ'ಯ ಹೆಸರಿನಲ್ಲಿದ್ದ ಕೆಫೆಯಲ್ಲಿ ಬೀಫ್ ಆಹಾರ ನೀಡಲಾಗುತ್ತಿದೆ ಹಾಗೂ ಅಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರ ಚಿತ್ರವನ್ನು ಗೋಡೆಗೆ ಹಾಕಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಮೂಲದ ಅಮೃತ್ ಸಿಂಗ್ ಡ್ಯಾರೆನ್ ಎಂಬ ವ್ಲಾಗರ್ ವಿಡಿಯೋ ಹಂಚಿಕೊಂಡ ನಂತರ ಈ ವಿವಾದ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಉತ್ತರ ಪ್ರದೇಶದ ವ್ಲಾಗರ್ ಅಮೃತ್ ಸಿಂಗ್ ಡ್ಯಾರೆನ್ ಫೋರ್ಟ್ ಕೊಚ್ಚಿಯಲ್ಲಿರುವ ಈ ಕೆಫೆಯ ಒಳಗಿನ ದೃಶ್ಯಗಳನ್ನು ವಿಡಿಯೋ ಮಾಡಿ, ಇದನ್ನು ಕೇರಳಕ್ಕೆ ಆವರಿಸಿರುವ 'ಮುಸ್ಲಿಂ ಭೀತಿಯ ಸಂಕೇತ' ಎಂದು ಬಿಂಬಿಸಲು ಯತ್ನಿಸಿದ್ದು, ಆಡಳಿತಾರೂಢ ಕಾಂಗ್ರೆಸ್ (UDF) ಹಾಗೂ ವಿರೋಧ ಪಕ್ಷದ ಸಿಪಿಐ(ಎಂ) ನಾಯಕರು ರಾಜ್ಯದ ಜಾತ್ಯತೀತ ಪರಂಪರೆ ಹಾಗೂ ಕೋಮು ಸೌಹಾರ್ದತೆಯ ಪರವಾಗಿ ಒಂದಾಗಿ ಧ್ವನಿ ಎತ್ತಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಕೇರಳದಲ್ಲಿ ಏನು ಮಾಡಬೇಕು ಎಂಬುದನ್ನು ಮಲಯಾಳಿಗಳೇ ತೀರ್ಮಾನಿಸುತ್ತಾರೆ ಎಂದು ಹೇಳುತ್ತಲೇ, ಭಾರತ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ವ್ಲಾಗರ್ ವಿರುದ್ಧ ಎಫ್‌ಐಆರ್ ದಾಖಲು

ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಫೋರ್ಟ್ ಕೊಚ್ಚಿಯ ಕಾಶಿ ಆರ್ಟ್ ಕೆಫೆಯ ವಿಡಿಯೋ ಅಪ್‌ಲೋಡ್ ಮಾಡಿದ್ದ ಅಮೃತ್ ಸಿಂಗ್ ಡ್ಯಾರೆನ್ ವಿರುದ್ಧ ಫೋರ್ಟ್ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಫೆಯೊಳಗೆ ಮಹಾತ್ಮ ಗಾಂಧಿ ಹಾಗೂ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಕಲಾಕೃತಿಯನ್ನು (Artwork) ಪ್ರದರ್ಶಿಸಿರುವುದನ್ನು ಪ್ರಶ್ನಿಸಿದ್ದ ವ್ಲಾಗರ್, ಇದು ದೇಶದ ಗೌರವಕ್ಕೆ ಬಗೆದ ಅಪಮಾನ ಎಂದು ಆರೋಪಿಸಿದ್ದರು.

ಅಲ್ಲದೆ, ಹಿಂದೂಗಳ ಪವಿತ್ರ ನಗರ 'ಕಾಶಿ' ಹೆಸರಿನ ಕೆಫೆಯಲ್ಲಿ ಬೀಫ್ ಖಾದ್ಯಗಳನ್ನು (Beef Dishes) ಪೂರೈಸುವುದನ್ನು ತೀವ್ರವಾಗಿ ವಿರೋಧಿಸಿದ್ದ ಅವರು, ಕೆಫೆಯ ಹೆಸರನ್ನು ತಕ್ಷಣವೇ ಬದಲಾಯಿಸಬೇಕೆಂದು ಆಗ್ರಹಿಸಿದ್ದರು. ಸೋಶಿಯಲ್‌ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಸುಳ್ಳು ಹಾಗೂ ಭಯಾನಕ ಮಾಹಿತಿಯನ್ನು ಹರಡುವುದು ಮತ್ತು ಸಮಾಜದಲ್ಲಿ ದಂಗೆಗೆ ಪ್ರಚೋದನೆ ನೀಡಿದ ಆರೋಪದಡಿ ಶನಿವಾರ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353 (2) ಹಾಗೂ 192 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಪೊಲೀಸರು ಈವರೆಗೆ ಡ್ಯಾರೆನ್ ಅವರನ್ನು ಬಂಧಿಸಿಲ್ಲ.

ಕೋಮು ಸೌಹಾರ್ದ ಕದಡಲು ಬಿಡಲ್ಲ - ಸಿಎಂ ವಿ.ಡಿ. ಸತೀಶನ್ ಮತ್ತು ಪಿಣರಾಯಿ ವಿಜಯನ್ ಆಕ್ರೋಶ

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿಡಿ ಸತೀಶನ್, "ಕಾನೂನು ತನ್ನದೇ ಆದ ಹಾದಿಯಲ್ಲಿ ಕೆಲಸ ಮಾಡಲಿದೆ. ಇತ್ತೀಚಿನ ಇನ್‌ಸ್ಟಾಗ್ರಾಮ್ ವಿಡಿಯೋ ಫೋರ್ಟ್ ಕೊಚ್ಚಿಯ ಬಗ್ಗೆ ತಪ್ಪು ಮಾಹಿತಿ ಹರಡಲು ಯತ್ನಿಸುತ್ತಿದ್ದು, ನಮ್ಮ ರಾಜ್ಯವನ್ನು ಋಣಾತ್ಮಕವಾಗಿ ಬಿಂಬಿಸಿ ಸಮುದಾಯಗಳನ್ನು ವಿಭಜಿಸಲು ಯತ್ನಿಸುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ಕೋಮು ಸೌಹಾರ್ದತೆಗೆ ಬದ್ಧವಾಗಿದೆ. ದ್ವೇಷಕ್ಕೆ ಇಲ್ಲಿ ಜಾಗವಿಲ್ಲ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಮಾತನಾಡಿ, "ಸ್ವಂತ ಲಾಭಕ್ಕಾಗಿ ದ್ವೇಷ ಹರಡುತ್ತಿರುವ ವ್ಲಾಗರ್ ಒಬ್ಬ ಇಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದ್ದಾನೆ. ಕೇರಳವನ್ನು ವಿಭಜಿಸುವಲ್ಲಿ ವಿಫಲವಾದ ನಂತರ ಸಂಘ ಪರಿವಾರವು ತನ್ನ ದ್ವೇಷದ ಪ್ರಚಾರವನ್ನು ಆನ್‌ಲೈನ್ ಗೂಂಡಾಗಳಿಗೆ ಔಟ್‌ಸೋರ್ಸ್ ಮಾಡುತ್ತಿದೆ. ಆದರೆ ಕೇರಳದ ಜಾತ್ಯತೀತ ಭಾವನೆ ಇಂತಹ ದ್ವೇಷದ ರಾಜಕಾರಣಕ್ಕೆ ಎಂದಿಗೂ ತಲೆಬಾಗುವುದಿಲ್ಲ. ಸರ್ಕಾರ ಈ ಕುರಿತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ಮಲಯಾಳಿಗಳೇ ತಮ್ಮ ಭವಿಷ್ಯ ನಿರ್ಧರಿಸಲಿದ್ದಾರೆ - ರಾಜೀವ್ ಚಂದ್ರಶೇಖರ್

ಭಾರತೀಯ ಜನತಾ ಪಾರ್ಟಿಯ ನಾಯಕ ರಾಜೀವ್ ಚಂದ್ರಶೇಖರ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡು, "ಕೇರಳದಲ್ಲಿ ಏನು ಮಾಡಬೇಕು, ಏನನ್ನು ತಿನ್ನಬೇಕು, ಏನು ಮಾತನಾಡಬೇಕು, ಏನನ್ನು ಹಾಡಬೇಕು ಹಾಗೂ ಏನನ್ನು ಆಚರಿಸಬೇಕು ಎಂಬುದನ್ನು ಮಲಯಾಳಿಗಳೇ ತೀರ್ಮಾನಿಸುತ್ತಾರೆ. ಹಿಂದೂ ಮಲಯಾಳಿ, ಕ್ರಿಶ್ಚಿಯನ್ ಮಲಯಾಳಿ ಅಥವಾ ಮುಸ್ಲಿಂ ಮಲಯಾಳಿ; ನಾವೆಲ್ಲರೂ ಒಂದಾಗಿ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೇವೆ" ಎಂದಿದ್ದಾರೆ.

ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಪಿಎಫ್‌ಐ (PFI) ಅಥವಾ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಹೇಳಿಕೆ ಬಂದಾಗ ಮಾತ್ರ ಪ್ರತಿಕ್ರಿಯಿಸಿದರೆ ಸಾಲದು. ಹಿಂದುಗಳು ಮತ್ತು ದೇಶಭಕ್ತರ ವಿರುದ್ಧ ಭಾರತ ವಿರೋಧಿ ಹೇಳಿಕೆಗಳು ಬಂದಾಗ ಹಾಗೂ ಹಮಾಸ್ ಬೆಂಬಲಿತ ಸಂಘಟನೆಗಳಿಗೆ ರಾಜ್ಯದಲ್ಲಿ ಮುಕ್ತ ಅವಕಾಶ ನೀಡಿದಾಗಲೂ ಮುಖ್ಯಮಂತ್ರಿಗಳು ದ್ವಂದ್ವ ನಿಲುವು ತೋರದೆ ತಕ್ಕ ಉತ್ತರ ನೀಡಬೇಕು" ಎಂದು ಸವಾಲೆಸೆದಿದ್ದಾರೆ.

ಏನಿದು 'ಕಾಶಿ ಆರ್ಟ್ ಕೆಫೆ'?

ಫೋರ್ಟ್ ಕೊಚ್ಚಿಯ ಬರ್ಗರ್ ಸ್ಟ್ರೀಟ್‌ನಲ್ಲಿರುವ ಹಳೆಯ ಡಚ್ ಶೈಲಿಯ ವಿಶಾಲವಾದ ಮನೆಯಲ್ಲಿ 1997 ಈ 'ಕಾಶಿ ಆರ್ಟ್ ಕೆಫೆ ಮತ್ತು ಗ್ಯಾಲರಿ' ಆರಂಭವಾಯಿತು. ಅನೂಪ್ ಸ್ಕಾರಿಯಾ ಮತ್ತು ಡೋರಿ ಯಂಗರ್ ಎನ್ನುವವರು ಈ ಗ್ಯಾಲರಿಯನ್ನು ಸಾಗಿಸಿಕೊಂಡು ಬಂದಿದ್ದು, 2012 ರ ಪ್ರಸಿದ್ಧ 'ಕೊಚ್ಚಿ-ಮುಜಿರಿಸ್ ಬಿನಾಲೆ'ಯ (Kochi-Muziris Biennale) ಪ್ರಮುಖ ಪ್ರದರ್ಶನ ತಾಣಗಳಲ್ಲಿ ಇದೂ ಒಂದಾಗಿತ್ತು. ಪ್ರಸ್ತುತ ಎಡ್ಗರ್ ಪಿಂಟೋ ಎಂಬುವವರು ಈ ಕೆಫೆಯ ಮಾಲೀಕರಾಗಿದ್ದಾರೆ.

ಇನ್ನು ಪ್ರಸ್ತುತ ವಿವಾದಕ್ಕೆ ಕಾರಣವಾಗಿರುವ ಗಾಂಧಿ-ಜಿನ್ನಾ ಕಲಾಕೃತಿಯು ಪ್ರಖ್ಯಾತ ಕಲಾವಿದ ರಿಯಾಸ್ ಕೊಮು ಎನ್ನುವವರು ಹಲವು ವರ್ಷಗಳ ಹಿಂದೆ ರಚಿಸಿದ ಅತ್ಯಂತ ಪ್ರಸಿದ್ಧ ಕಲಾಕೃತಿಯಾಗಿದೆ (Art Piece). ಇದು ಇಬ್ಬರೂ ಐತಿಹಾಸಿಕ ನಾಯಕರ ಜೀವನ ಮತ್ತು ಭಾರತ-ಪಾಕಿಸ್ತಾನ ವಿಭಜನೆಯ ಕಥೆಯನ್ನು ಕಲಾತ್ಮಕವಾಗಿ ಬಿಂಬಿಸುತ್ತದೆ.

kerala kochi kashi art cafe beef menu jinnah painting controversy san