3 ಕೃಷಿ ಕಾಯ್ದೆ ವಿರುದ್ಧ ಗೊತ್ತುವಳಿ ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯಲು ಅನುಮತಿ ನೀಡಬೇಕೆಂದು ಕೇರಳ ಸರ್ಕಾರ ರಾಜ್ಯಪಾಲರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ತಿರುವನಂತಪುರಂ(ಡಿ.25): ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಕಾಯ್ದೆ ವಿರುದ್ಧ ಗೊತ್ತುವಳಿ ಅಂಗೀಕರಿಸಲು ಡಿ.31ರಂದು ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಮತ್ತೊಮ್ಮೆ ಶಿಫಾರಸು ಮಾಡಲು ಕೇರಳ ಸಚಿವ ಸಂಪುಟ ತೀರ್ಮಾನಿಸಿದೆ. ಸಂಪುಟ ಸಭೆಯ ಬಳಿಕ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಬಾರಿ ವಿಶೇಷ ಅಧಿವೇಶನ ನಡೆಸಲು ರಾಜ್ಯಪಾಲರು ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಮುನ್ನ ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಹಾಗೂ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಡಿ.23ರಂದು ಒಂದು ದಿನದ ವಿಶೇಷ ಅಧಿವೇಶನ ಕರೆಯುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ಲೋನ್ ಕೊಡದ ಬ್ಯಾಂಕಿನ ಮುಂದೆ ತಂದು ಕಸ ಸುರಿದ್ರು!
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕೆ ಆಡಳಿತರೂಢ ಎಲ್‌ಡಿಎಫ್(ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್) ಹಾಗೂ ವಿರೋಧ ಪಕ್ಷವಾದ ಯುಡಿಎಫ್(ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್) ಒಕ್ಕೊರಲಿನಿಂದ ಕಠಿಣವಾಗಿ ಟೀಕಿಸಿದ್ದವು.
ಆದರೆ ಈ ಬಾರಿ ರಾಜ್ಯಪಾಲರು ವಿಶೇಷ ಅಧಿವೇಶನ ನಡೆಸಲು ಅನುಮತಿ ನೀಡುವ ಬಗ್ಗೆ ವಿಶ್ವಾಸವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಬಹುಮತ ಹೊಂದಿದ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಗವರ್ನರ್ ಸಾಮಾನ್ಯವಾಗಿ ಒಪ್ಪಿಗೆ ಸೂಚಿಸುತ್ತಾರೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ 3 ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ, ಅದರಲ್ಲೂ ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
