Narayana Guru Tableau: ನಾರಾಯಣ ಗುರು ಟ್ಯಾಬ್ಲೋಗೆ ಕೇಂದ್ರ ತಿರಸ್ಕಾರ: ತೀವ್ರ ವಿವಾದ
* ಕೇಂದ್ರ ಮತ್ತು ಶ್ರೀ ನಾರಾಯಣ ಗುರು ಮಠ ನಡುವೆ ಭುಗಿಲೆದ್ದ ವಿವಾದ
* ನಾರಾಯಣ ಗುರು ಟ್ಯಾಬ್ಲೋಗೆ ಕೇಂದ್ರ ತಿರಸ್ಕಾರ: ವಿವಾದ
ತಿರುವನಂತಪುರ(ಜ.15): ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇರಳದಿಂದ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಶಿವಗಿರಿ ಮಠ ಮತ್ತು ಕೇಂದ್ರ ಸರ್ಕಾರದ ನಡುವೆ ಭಾರೀ ವಿವಾದ ಸೃಷ್ಟಿಯಾಗಿದೆ. ಮಠದ ನೇತೃಥ್ವದ ವಹಿಸಿರುವ ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್ ಕೇಂದ್ರದ ನಿರ್ಧಾರವನ್ನು ಖಂಡಿಸಿದೆ.
ರಾಜ್ಯ ಸರ್ಕಾರದ ಪ್ರಕಾರ, :ತೀರ್ಪುಗಾರರ ಸಮಿತಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆದಿಶಂಕರಾಚಾರ್ಯರ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಲಹೆ ನೀಡಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಒಳಗೊಂಡಿದ್ದ ಸ್ತಬ್ಧಚಿತ್ರ ಕಳುಹಿಸಲು ಕೇರಳ ನಿರ್ಧರಿಸಿದೆ. ಹೀಗಾಗಿ ಅದನ್ನು ಕೇಂದ್ರಸರ್ಕಾರ ತಿರಸ್ಕರಿಸಿದೆ.’
ರಕ್ಷಣಾ ಸಚಿವಾಲಯವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರದರ್ಶನಕ್ಕಾಗಿ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲು ತೀರ್ಪುಗಾರರನ್ನು ನೇಮಿಸುತ್ತದೆ.
ಆಕ್ಷೇಪ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಸ್ಟ್‌ನ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಅವರು, ‘ಇದು ಮಲಯಾಳಿಯಲ್ಲದ ಅಧಿಕಾರಿಗಳು ಮಾಡಿದ ತಪ್ಪಾಗಿರಬಹುದು ಅಥವಾ ಮೇಲ್ಜಾತಿಯ ಪ್ರಾಬಲ್ಯದಿಂದ ಉದ್ದೇಶಪೂರ್ವಕ ಮಾಡಿದ ಕೃತ್ಯವಾಗಿರಬಹುದು. ಆದರೆ ತೀರ್ಪುಗಾರರ ಪಕ್ಷಪಾತ ಧೋರಣೆಯು ಗುರು ಮತ್ತು ಮಠದ ಲಕ್ಷಾಂತರ ಅನುಯಾಯಿಗಳಿಗೆ ನೋವುಂಟುಮಾಡಿದೆ. ತಪ್ಪನ್ನು ಸರಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಾಕಷ್ಟುಸಮಯ ಇದೆ’ ಎಂದು ತಿಳಿಸಿದ್ದಾರೆ.