ಕೊಚ್ಚಿ(ಜು.21): ಕೇರಳದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಚಿನ್ನ ಸಾಗಣೆ ಪ್ರಕರಣದ ಕಿಂಗ್‌ಪಿನ್‌ ಸ್ವಪ್ನಾ ಸುರೇಶ್‌ ಹಾಗೂ ಇತರ ಆರೋಪಿಗಳು ಕಳೆದ ಒಂದು ವರ್ಷದಿಂದ ರಾಜತಾಂತ್ರಿಕ ಮಾರ್ಗದ ಮೂಲಕ 300 ಕೆ.ಜಿ.ಯಷ್ಟುಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಮೈಮಾಟದಿಂದ ಅಧಿಕಾರಿಗಳು ಬುಟ್ಟಿಗೆ, ಸ್ವಪ್ನಾ ಅಕ್ರಮ ಚಿನ್ನ ಸಾಗಣೆಗೆ ಬಳಸಿಕೊಂಡಿದ್ದ ಮಾರ್ಗ!

ಕಳೆದ ವರ್ಷ ಜುಲೈನಲ್ಲಿ ಸ್ವಪ್ನಾ ಸುರೇಶ್‌ ರಾಜತಾಂತ್ರಿಕ ವಿಧಾನವನ್ನು ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳಸಾಗಣೆ ಮಾಡುವ ಕಾರ್ಯವನ್ನು ಆರಂಭಿಸಿದ್ದಳು. ಮೊದಲ ಕಂತಿನಲ್ಲಿ ಚಿನ್ನ ತಿರುವನಂತಪುರಂಗೆ ಯಶಸ್ವಿಯಾಗಿ ಬಂದು ತಲುಪಿತ್ತು. ಆ ಬಳಿಕ ಇದೇ ವಿಧಾನವನ್ನು ಬಳಸಿಕೊಂಡು 13 ಬಾರಿ ಚಿನ್ನ ಕಳ್ಳಸಾಗಣೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ 30 ಕೆ.ಜಿ. ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆಳಕಿಗೆ ಬಂದಿತ್ತು.

ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕ ಕಳೆದ ಜುಲೈನಿಂದ ಸುಮಾರು 300 ಕೆ.ಜಿ.ಯಷ್ಟುಚಿನ್ನವನ್ನು ಸ್ವಪ್ನಾ ಸುರೇಶ್‌ ಮತ್ತು ಇತರ ಆರೋಪಿಗಳ ತಂಡ ಕಳ್ಳಸಾಗಣೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.