ತಿರುವನಂತಪುರಂ(ಮಾ.04): ಕೇರಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಹೀಗಿರುವಾಗ ಎಲ್ಲಾ ಪಕ್ಷಗಳು ಮತದಾರನ ಮನವೊಳಿಸುವ ಯತ್ನ ಆರಂಭಿಸಿದ್ದಾರೆ. ಜನರ ಮತ ಗಳಿಸುವ ಭರಾಟೆಯಲ್ಲಿ ವಾಗ್ದಾಳಿಯೂ ಮುಂದುವರೆದಿದ್ದು, ಜನರ ಅನೇಕ ಭರವಸೆ ಈಡೇರಿಸುವ ಮಾತುಗಳೂ ಕೇಳಿ ಬಂದಿವೆ. ಹೀಗಿರುವಾಗಲೇ ಬಿಜೆಪಿಯು ಸದ್ಯ ಮಹತ್ವದ ಘೋಷಣೆಯೊಂದನ್ನು ಮಾಡಿದೆ.

ಹೌದು ಕೇರಳ ಚುನಾವಣೆಯಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸುತ್ತಿರುವ ಬಿಜೆಪಿ, ತಮ್ಮ ಪಕ್ಷ ಇಲ್ಲಿ ಗೆಲುವು ಸಾಧಿಸಿದರೆ ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ  ಇ. ಶ್ರೀಧರನ್‌ರನ್ನೇ ಮುಖ್ಯಮಂತ್ರಿಯಾಗಿ ಮಾಡುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಘೋಷಿಸಿದ್ದಾರೆ. 

ದೇಶದ ಮೆಟ್ರೋ ರೈಲ್ವೆ ಯೋಜನೆಗಳ ಹಿಂದಿನ ಮೆದುಳು ಎನ್ನಲಾಗುವ ಶ್ರೀಧರನ್‌ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದರು. ಇದೇ ಸಂದರ್ಭದಲ್ಲಿ ಒಂದು ವೇಳೆ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗಲು ಸಿದ್ಧವಿರುವುದಾಗಿ ಖುದ್ದು ತಾವೇ ಹೇಳಿದ್ದರು. ಅಲ್ಲದೇ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಗುರಿಯಾಗಿದೆ ಎಂದಿದ್ದ ಮೆಟ್ರೋ ಮ್ಯಾನ್, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ಗಣ್ಯರನ್ನು ಪಕ್ಷಕ್ಕೆ ಸೇರಿಸಲು ಬಿಜೆಪಿ ಯತ್ನ:

ಕೇರಳದಲ್ಲಿ ಗೆಲ್ಲಲು ‘ಮಿಷನ್‌ ಸೌತ್‌’ ಹೆಸರಿನಲ್ಲಿ ಪಣ ತೊಟ್ಟಿರುವ ಬಿಜೆಪಿ ನಾಯಕರು ಚಿತ್ರರಂಗದ ಜನಪ್ರಿಯ ತಾರೆಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೇತಾರರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಖ್ಯಾತನಾಮರು ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.