ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪಕ್ಕೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದ್ದಾರೆ.

ತಿರುವನಂತಪುರಂ : ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪಕ್ಕೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ ಕೇರಳದಲ್ಲಿ ಶಾಲೆಗಳಿಗೆ ಬಿಸಿಲಿನ ತಾಪ ಹೆಚ್ಚಿರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರಜೆ ನೀಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿತ್ತು.

 ಮುಂಗಾ ರಿನ ಸಮಯವಾಗಿರುವ ಜೂನ್, ಜುಲೈಗಳಲ್ಲಿ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ಕೆಲವೊಮ್ಮೆ ರಜೆ ನೀಡಬೇಕಾಗುತ್ತದೆ. ಇದರಿಂದ ಮಕ್ಕಳ ಅಧ್ಯಯನಕ್ಕೂ ತೊಂದರೆ. ಹೀಗಾಗಿ ರಜಾ ಅವಧಿಯನ್ನು ಜೂನ್ ಮತ್ತು ಜುಲೈಗೆ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತದೆ ಎಂದಿದ್ದಾರೆ’.

ಇದೇ ವೇಳೆ ಅವರು ಬದಲಾವಣೆ ಜಾರಿಗೆ ತರುವುದರಿಂದಾಗುವ ಸಂಭಾವ್ಯ ಅನುಕೂಲಗಳು ಮತ್ತು ಅನಾನುಕೂಲಗಳ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆಗಳಿಗೆ ಆಹ್ವಾನಿಸಿದ್ದಾರೆ.

ಉಷ್ಣ ಮಾರುತದ ಪ್ರಭಾವ - ಸಮವಸ್ತ್ರದಲ್ಲಿ ಸಡಿಲಿಕೆ

ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಹೆಚ್ಚಿದ್ದ ಕಾರಣ ವಿದ್ಯಾರ್ಥಿಗಳನ್ನು ಬಿಸಿಲಿನ ಅಡ್ಡ ಪರಿಣಾಮಗಳಿಂದ ಕಾಪಾಡಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರದಲ್ಲಿ ಸಡಿಲಿಕೆ ಸೇರಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿತ್ತು

ಆದರೆ ಶಾಲೆ ಆರಂಭ ಮುಂದೂಡಿಕೆ ಬೇಡ ಎಂದಿರುವ ಅದು, ಈ ಕುರಿತ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ದೇಶದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಪ್ರಮಾಣ 45 ಡಿ.ಸೆ.ಗಿಂತ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ