ತಿರುವನಂತಪುರಂ(ಅ.08): ಯುಎಇ ರಾಯಭಾರ ಕಚೇರಿಯ ಬ್ಯಾಗ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಉರುಳಾಗುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಸೇರಿದಂತೆ ಮೂವರ ವಿರುದ್ಧ ಬುಧವಾರ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿದಾಖಲಿಸಿದೆ.

ಇದರಲ್ಲಿ ಸ್ವಪ್ನಾ ಸುರೇಶ್‌ ನೀಡಿರುವ ತಪ್ಪೊಪಿಗೆ ಹೇಳಿಕೆಯನ್ನು ಉಲ್ಲೇಖಿಸಲಾಗಿದ್ದು, ತನ್ನನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯ ಸ್ಪೇಸ್‌ ಪಾರ್ಕ್ಗೆ ನೇಮಿಸಿದ ಸಂಗತಿ ಪಿಣರಾಯಿ ವಿಜಯನ್‌ ಅವರಿಗೆ ಗೊತ್ತಿತ್ತು. ಅಲ್ಲದೆ ತನಗೆ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮುಖ್ಯಮಂತ್ರಿಗಳ ಕಚೇರಿಯ ಮಾಜಿ ಕಾರ್ಯದರ್ಶಿ ಎಂ. ಶಿವಶಂಕರ್‌ ಸೂಚಿಸಿದ್ದರು. ನನ್ನ ನೇಮಕಾತಿಯ ಕುರಿತಾಗಿ ಶಿವಶಂಕರ್‌ ಮುಖ್ಯಮಂತ್ರಿಯ ಜೊತೆಗೆ ಚರ್ಚೆಯನ್ನೂ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾಳೆ.

ಚಿನ್ನ ಸಾಗಣೆ ಕೇಸ್‌ ಬೆಳಕಿಗೆ ಬಂದಾಗಿನಿಂದಲೂ ಪಿಣರಾಯಿ ವಿಜಯನ್‌ ಅವರು ಸ್ವಪ್ನಾ ಸುರೇಶ್‌ ನೇಮಕದ ಬಗ್ಗೆ ತಮಗೆ ಗೊತ್ತೇ ಇರಲಿಲ್ಲ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಈಗ ಸ್ವಪ್ನಾ ಸುರೇಶ್‌ ನೀಡಿದ ತಪ್ಪೊಪ್ಪಿಗೆ ಹೇಳಿಕೆ ವಿಜಯನ್‌ಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನ್‌ ಅವರ ಕಾರ್ಯದರ್ಶಿ ಆಗಿದ್ದ ಶಿವಶಂಕರ್‌ ಅವರನ್ನು ಇನ್ನಷ್ಟುವಿಚಾರಣೆ ಮಾಡುವ ಅಗತ್ಯವಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಇದೇ ವೇಳೆ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್‌, ಸಂದೀಪ್‌ ನಾಯರ್‌ ಮತ್ತು ಸರಿತ್‌ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ. ಈ ಆರೋಪಿಗಳು ಭಾರೀ ಪ್ರಮಾಣದ ಆಸ್ತಿ ಹೊಂದಿದ್ದು, ಅವರ ಆಸ್ತಿಯ ಮೂಲಕ ರಹಸ್ಯವಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.