ತಿರುವನಂತಪುರ(ಡಿ.13): ಕೊರೋನಾ ಲಸಿಕೆಯನ್ನು ರಾಜ್ಯದ ಎಲ್ಲಾ ಜನರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶನಿವಾರ ಪ್ರಕಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆಗಾಗಿ ಯಾರಿಗೂ ಶುಲ್ಕ ವಿಧಿಸುವುದಿಲ್ಲ. ಇದು ತಮ್ಮ ಸರ್ಕಾರದ ನಿಲುವಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡು ಮತ್ತು ಮಧ್ಯ ಪ್ರದೇಶ ರಾಜ್ಯಗಳು ಈಗಾಗಲೇ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿವೆ. ಈ ಸಾಲಿಗೆ ಈಗ ಕೇರಳವೂ ಸೇರ್ಪಡೆ ಆಗಿದೆ.

ಭಾರತದಲ್ಲಿ ಕೊರೋನಾ ಲಸಿಕೆ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆ ಇದೆ.

ಬಹ್ರೇನ್‌ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ

ಫೈಝರ್‌ ಕೊರೋನಾ ಲಸಿಕೆ ಬಳಕೆಗೆ ಸೌದಿ ಅರೇಬಿಯಾ ಅನುಮೋದನೆ ನೀಡಿದ ಬೆನ್ನಲ್ಲೇ, ಗಲ್‌್ಫ ರಾಷ್ಟ್ರಗಳ ಪೈಕಿ ಒಂದಾದ ಬಹ್ರೇನ್‌ ಸಾರ್ವಜನಿಕರಿಗೆ ಉಚಿತ ಕೊರೋನಾ ಲಸಿಕೆ ವಿತರಿಸುವುದಾಗಿ ಪ್ರಕಟಿಸಿದೆ.

ಬಹ್ರೇನ್‌ನ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೋನಾ ಲಸಿಕೆ ವಿತರಿಸಲಾಗುವುದು ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿ ದಿನ 10,000 ಲಸಿಕೆಯಂತೆ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡುವ ಉದ್ದೇಶವನ್ನು ಬಹ್ರೇನ್‌ ಹೊಂದಿದೆ. ಸೌದಿ ಅರೇಬಿಯಾ ಕರಾವಳಿಗೆ ಹೊಂದಿಕೊಂಡಿರುವ ಪುಟ್ಟದ್ವೀಪವಾಗಿರುವ ಬಹ್ರೇನ್‌ ಸುಮಾರು 15 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಒಂದು ವಾರದ ಹಿಂದೆ ಫೈಝರ್‌ ಲಸಿಕೆಯ ತುರ್ತು ಬಳಕೆಗೆ ಬಹ್ರೇನ್‌ ಅನುಮೋದನೆ ನೀಡಿತ್ತು.

ಈ ಮೂಲಕ ಫೈಝರ್‌ ಲಸಿಕೆಗೆ ಅನುಮೋದನೆ ನೀಡಿದ ಎರಡನೇ ದೇಶ ಎನಿಸಿಕೊಂಡಿತ್ತು.