ಕೇರಳದ ಮಲ್ಲಪುರಂನಲ್ಲಿ ಮನೆಯ ಗೋಡೆಯ ಮೊಳೆಗೆ ಶರ್ಟ್ ಕಾಲರ್ ಸಿಲುಕಿ 11 ವರ್ಷದ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ ಆಘಾತಕಾರಿ ಘಟನೆ ನಡೆದಿದೆ.
ಮಲ್ಲಪುರಂ: ಗೋಡೆಗೆ ಹೊಡೆದಿದ್ದ ಅಣಿ(ಮೊಳೆ)ಗೆ ಬಾಲಕ ಧರಿಸಿದ್ದ ಶರ್ಟ್ ಕಾಲರ್ ಸಿಲುಕಿಕೊಂಡು ಉಸಿರುಕಟ್ಟಿದ ಹಿನ್ನೆಲೆ ಬಾಲಕ ಸಾವಿಗೀಡಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಬಾಲಕನನ್ನು 6 ತರಗತಿ ವಿದ್ಯಾರ್ಥಿ 11 ವರ್ಷದ ಧವನಿತ್ ಎಂದು ಗುರುತಿಸಲಾಗಿದೆ. ಮಲ್ಲಪುರಂನ ವಲ್ಲಿಕ್ಕಂಜಿರಮ್ ಎಂಬ ಪ್ರದೇಶದಲ್ಲಿ ಇರುವ ಮನೆಯಲ್ಲಿ ಈ ದುರಂತ ನಡೆದಿದೆ. ಬಾಲಕ ಧವನಿತ್ ನಿರಮರುಥುರ್ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ.
ಬೆಡ್‌ರೂಮ್ ಗೋಡೆಯಲ್ಲಿದ್ದ ಮೊಳೆಗೆ ಸಿಲುಕಿದ ಶರ್ಟ್ ಕಾಲರ್
ಧವನಿತ್ ಮಣಿಕಂಡನ್ ಹಾಗೂ ದಿವ್ಯಾ ಅವರ ಪುತ್ರನಾಗಿದ್ದು, ಮನೆಯ ಬೆಡ್‌ರೂಮ್‌ನಲ್ಲಿ ಒಬ್ಬನೇ ಇದ್ದ ವೇಳೆ ಆತ ಧರಿಸಿದ್ದ ಶರ್ಟ್‌ನ ಕಾಲರ್ ಗೋಡೆಯಲ್ಲಿದ್ದ ಮೊಳೆಗೆ ಸಿಲುಕಿ ಶರ್ಟ್ ಕಾಲರ್ ನೇಣಿನಂತೆ ಬಾಲಕನ ಕತ್ತನ್ನು ಬಿಗಿಗೊಳಿಸಿದೆ. ಇದರಿಂದ ಬಾಲಕನ ಉಸಿರಾಟದ ನಾಳ ಕತ್ತರಿಸಲ್ಪಟ್ಟಿದ್ದು ಬಾಲಕನ ಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಬಾಲಕನ ಕೂಗಾಟ ಕೇಳಿ ಕೂಡಲೇ ತಂದೆ ಮಣಿಕಂಡನ್ ಕೋಣೆಗೆ ಓಡಿ ಹೋಗಿ ಬಾಲಕನನ್ನು ಗೋಡೆಯ ಮೊಳೆಯಿಂದ ಬಿಡಿಸಿ ಸಮೀಪದ ತಿರೂರ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಚಿಕಿತ್ಸೆ ವೇಳೆ ಬಾಲಕ ಸಾವು
ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಬಾಲಕನ ಗಂಭೀರ ಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಜಿಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಅಲ್ಲಿ ಬಾಲಕನಿಗೆ ಕೂಡಲೇ ಚಿಕಿತ್ಸೆ ನೀಡಿದರು. ಆದರೆ ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ವೇಳೆಯೇ ಶನಿವಾರ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾನೆ. ಬಾಲಕನ ಈ ಹಠಾತ್ ಸಾವು ಪೋಷಕರು ಮಾತ್ರವಲ್ಲದೇ ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ.
ಪೋಷಕರು ಕುಟುಂಬಸ್ಥರಿಗೆ ಆಘಾತ
ನಂತರ ಕೋಜಿಕೋಡ್ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಾಲಕನ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಯ್ತು. ನಂತರ ತಿರೂರ್‌ನ ಪೊಟ್ಟಿಲಥರ ಸ್ಮಶಾನದಲ್ಲಿ ಬಾಲಕನ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ನಿರೀಕ್ಷಿಸದ ರೀತಿಯಲ್ಲಿ ಬಾಲಕನ ಹಠಾತ್ ಸಾವು ಪೋಷಕರು ಹಾಗೂ ಸಂಬಂಧಿಕರಿಗೆ ಭಾರಿ ಆಘಾತ ಉಂಟು ಮಾಡಿದೆ.