ಕೇರಳ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿರುವ ಶಂಕಿತ ಆರೋಪಿ ಡೊಮ್ನಿಕ್ ಮಾರ್ಟಿನ್‌ನ್ನು ಇಂದು ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನವೆಂಬರ್ 29ರ ವರೆಗೆ ಡೊಮ್ಮಿಕ್‌ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೊಚ್ಚಿ(ಅ.31) ಕೇರಳದ ಕಳಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ. 12 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಶಂಕಿತ ಆರೋಪಿ ಡೊಮ್ನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದ. ಸತತ ವಿಚಾರಣೆ ಬಳಿ ಆರೋಪಿಯನ್ನು ಬಂಧಿಸಿದ ಪೊಲೀಸರು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿತ್ತು. ಈ ವೇಳೆ ಡೊಮ್ನಿಕ್ ಮಾರ್ಟಿನನ್ನು ನವೆಂಬರ್ 29ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಡೊಮ್ನಿಕ್ ಮಾರ್ಟಿನನ್ನು ಎರ್ನಾಕುಳಂ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಡೊಮ್ನಿಕ್ ದಾಳಿ ಹಿಂದಿನ ರೂವಾರಿ ಅನ್ನೋದು ಪತ್ತೆಯಾಗಿದೆ. ಆದರೆ ನೀಲಿ ಬಣ್ಣದ ಕಾರು ಸೇರಿದಂತೆ ಹಲವು ಅನುಮಾನಗಳು ಹಾಗೇ ಉಳಿದುಕೊಂಡಿದೆ. ಕೇಂದ್ರ ತನಿಖಾ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿದೆ.
ಕೇರಳ ಸ್ಫೋಟದ ಹೊಣೆಹೊತ್ತು ಪೊಲೀಸರಿಗೆ ಶರಣಾದ ಶಂಕಿತ, ಪ್ರಕರಣಕ್ಕೆ ಟ್ವಿಸ್ಟ್!
ಝಮ್ರಾ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ 2500ಕ್ಕೂ ಹೆಚ್ಚು ಜನರು ಸಾಮೂಹಿಕ ಪ್ರಾರ್ಥನೆ ಮಾಡುವ ವೇಳೆ ಬಾಂಬ್ ಸ್ಫೋಟಗೊಂಡಿತ್ತು. ಘಟನೆ ಬೆನ್ನಲ್ಲೇ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ತ್ರಿಶ್ಶೂರು ಜಿಲ್ಲೆಯ ಕೊಡಕ್ಕರ ಪೊಲೀಸ್ ಠಾಣೆಗೆ ಶರಣಾಗಿದ್ದು, ದಾಳಿಯನ್ನು ಮಾಡಿದವ ತಾನೇ ಎಂದು ಹೇಳಿಕೊಂಡಿದ್ದಾನೆ. ವಿಚಿತ್ರವೆಂದರೆ. ಬಾಂಬ್ ಸ್ಫೋಟಗೊಂಡಿದ್ದು ‘ಜೆಹೋವಾಸ್ ವಿಟ್ನೆಸಿಸ್’ ಎಂಬ ಕ್ರೈಸ್ತ ಧರ್ಮದ ಒಳಪಂಗಡವೊಂದರ (ಪಂಥ) ಧಾರ್ಮಿಕ ಸಮಾರಂಭದಲ್ಲಿ ಹಾಗೂ ಬಾಂಬ್ ಸ್ಫೋಟ ಮಾಡಿದ್ದೂ ಇದೇ ಪಂಥದ ವ್ಯಕ್ತಿ.
ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿರುವ ದಾಳಿಕೋರ ಮಾರ್ಟಿನ್, ‘ಕಳೆದ 16 ವರ್ಷದಿಂದ ನಾನು ಈ ಸಂಘಟನೆಯ ಸದಸ್ಯನಾಗಿದ್ದೆ. ಆದರೆ 6 ವರ್ಷದಿಂದ ಈ ಸಂಘಟನೆಯ ಚಿಂತನೆಗಳು ಬದಲಾಗಿದ್ದವು. ರಾಷ್ಟ್ರಗೀತೆಗಳನ್ನು ಹಾಡದಂತೆ ಜೆಹೋವಾಸ್ ಪಂಥೀಯರಿಗೆ ಬೋಧನೆ ಮಾಡಲಾಗಿತ್ತು. ಅಲ್ಲದೆ 4 ವರ್ಷದ ಮಗವಿಗೆ ಕೂಡ ‘ಇನ್ನೊಬ್ಬ ಮಗುವೊಂದಿಗೆ ಚಾಕೋಲೇಟ್ ಹಂಚಿಕೊಳ್ಳಬೇಡ’ ಎಂದು ಬೋಧಿಸಿ ಮಕ್ಕಳ ನಡುವೆಯೇ ದ್ವೇಷ ಹರಡಿಸಲಾಗುತ್ತಿತ್ತು. ಕೇರಳದಲ್ಲಿ ನೈಸರ್ಗಿಕ ವಿಕೋಪದ ವೇಳೆ ಎಲ್ಲರಿಗೂ ಸಹಾಯ ಮಾಡದೇ ಜೆಹೋವಾ ಪಂಥದ ಮನೆಗಳಿಗೆ ಮಾತ್ರ ಸಂಘಟನೆಯವರು ಸಹಾಯ ಮಾಡಿದರು. ಇದರಿಂದ ಕ್ರುದ್ಧನಾಗಿ ನಾನು ಅಂದಿನಿಂದಲೇ ಇಂಥ ದೇಶದ್ರೋಹಿ ಹಾಗೂ ದ್ವೇಷಕಾರಕ ಬೋಧನೆಗಳನ್ನು ಕೈಬಿಡಿ ಎಂದು ಒತ್ತಾಯಿಸುತ್ತಿದ್ದೆ. ನನ್ನ ಮಾತಿಗೆ ಅವರು ಕಿವಿಗೊಡಲಿಲ್ಲ. ಹೀಗಾಗಿ ನಾನು ಬಾಂಬ್ ಸ್ಫೋಟಿಸಿದೆ’ ಎಂದಿದ್ದಾನೆ.
