- ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕೈಗೆ ಸಿಗಬಾರದು ಎಂದು ಈ ತಂತ್ರ- ಮೇ 20ರ ಬಿಎಸ್‌ಎಫ್‌ ಯೋಧರ ಮೇಲಿನ ದಾಳಿಗೆ ಆ್ಯಂಬುಲೆನ್ಸ್‌ ಬಳಕೆ- ದಾಳಿಗೆ ಆ್ಯಂಬುಲೆನ್ಸ್‌ನಲ್ಲೇ ಬಂದು ಆ್ಯಂಬುಲೆನ್ಸ್‌ನಲ್ಲೇ ಪರಾರಿಯಾಗಿದ್ದ ಉಗ್ರರು

ಶ್ರೀನಗರ (ಸೆ.11): ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಉಗ್ರರು ರಂಗೋಲಿ ಕೆಳಗೆ ನುಸುಳುವ ತಂತ್ರ ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ. ಉಗ್ರಗಾಮಿಗಳು ದಾಳಿಗೆ ಆಗಮಿಸುವಾಗ ಹಾಗೂ ದಾಳಿ ಬಳಿಕ ತಮ್ಮ ಅಡಗುದಾಣಗಳಿಗೆ ವಾಪಸು ಮರಳುವಾಗ, ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕೈಗೆ ಸಿಗಬಾರದು ಎಂದು ಸೈರನ್‌ ಹಾಕಿಕೊಂಡು ಆ್ಯಂಬುಲೆನ್ಸ್‌ನಲ್ಲಿ ಸಂಚರಿಸುತ್ತಿರುವುದು ಪತ್ತೆಯಾಗಿದೆ.

ಶ್ರೀನಗರದ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿ ಹಬೀಬ್‌ ಮುಘಲ್‌ ಅವರೇ ಈ ವಿಷಯ ದೃಢಪಡಿಸಿದ್ದಾರೆ. ಕಳೆದ ವಾರ ಪೊಲೀಸರು ಇಂಥ 2 ಆ್ಯಂಬುಲೆನ್ಸ್‌ ವಶಪಡಿಸಿಕೊಂಡರು. ಇಂಥ ಒಂದು ಆ್ಯಂಬುಲೆನ್ಸ್‌ ಶ್ರೀನಗರ ಆಸ್ಪತ್ರೆಯೊಂದರ ವೈದ್ಯ ಡಾ

ಸೂಸನ್‌ ಜಲಾಲಿ ಎಂಬುವರ ಹೆಸರಿನಲ್ಲಿ ಹಾಗೂ ಇನ್ನೊಂದು ಆ್ಯಂಬುಲೆನ್ಸ್‌ ಮೋಮಿನ್‌ ವೆಲ್‌ಫೇರ್‌ ಟ್ರಸ್ಟ್‌ ಹೆಸರಿನಲ್ಲಿ ನೋಂದಣಿ ಆಗಿದೆ.

ಭಾರತೀಯ ವಾಯುಪಡೆಗೆ ರಫೇಲ್ ಸೇರ್ಪಡೆ

ಈ ಎರಡೂ ಆ್ಯಂಬುಲೆನ್ಸ್‌ಗಳು ಮೇ 20ರಂದು ಶ್ರೀನಗರ ಹೊರವಲಯದಲ್ಲಿ ಬಿಎಸ್‌ಎಫ್‌ನ 37ನೇ ಬೆಟಾಲಿಯನ್‌ ಮೇಲೆ ನಡೆದ ದಾಳಿಯಲ್ಲಿ ಬಳಕೆ ಆಗಿದ್ದವು. ಈ ದಾಳಿಯಲ್ಲಿ ಇಬ್ಬರು ಯೋಧರನ್ನು ಹತ್ಯೆ ಮಾಡಲಾಗಿತ್ತು. ಒಂದು ಆ್ಯಂಬುಲೆನ್ಸ್‌, ಉಗ್ರರನ್ನು ಅನಂತನಾಗ್‌ನಿಂದ ಶ್ರೀನಗರವರೆಗೆ ಕರೆದೊಯ್ಯಲು ಬಳಕೆ ಆಗಿತ್ತು. ಇನ್ನೊಂದು ಆ್ಯಂಬುಲೆನ್ಸ್‌, ದಾಳಿ ಮುಗಿಸಿದ ಉಗ್ರರನ್ನು ದಕ್ಷಿಣ ಕಾಶ್ಮೀರದ ಊರಿಗೆ ವಾಪಸ್‌ ಮರಳಿಸಿತ್ತು ಎಂದು ಮುಘಲ್‌ ಹೇಳಿದ್ದಾರೆ.

ಇತ್ತೀಚೆಗೆ ಪತ್ತೆಯಾಗಿತ್ತು ಸುರಂಗ:
ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗಿರುವ ಉಗ್ರರ ಹತ್ಯೆ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಮುಂದುವರಿಸಿರುವಾಗಲೇ, ಕಣಿವೆ ರಾಜ್ಯಕ್ಕೆ ಮತ್ತಷ್ಟು ಭಯೋತ್ಪಾದಕರನ್ನು ನುಸುಳಿಸಲು ಪಾಕಿಸ್ತಾನ ಸುರಂಗದ ಮೊರೆ ಹೋಗಿರುವ ಸಂಗತಿ ಇತ್ತೀಚೆಗೆ ಪತ್ತೆಯಾಗಿತ್ತು. ಅಂತಾರಾಷ್ಟ್ರೀಯ ಗಡಿ ಬೇಲಿಯ ಕೆಳಭಾಗದಲ್ಲಿ ಪಾಕಿಸ್ತಾನಿ ಉಗ್ರರು ನಿರ್ಮಿಸಿದ್ದ ಸುರಂಗವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಪತ್ತೆ ಹಚ್ಚಿತ್ತು.

ಪಾಕಿಸ್ತಾನದ ಈ ದುಷ್ಟ ಸಂಚಿನಿಂದ ಎಚ್ಚೆತ್ತಿರುವ ಬಿಎಸ್‌ಎಫ್‌, ಭಾರಿ ಸಂಖ್ಯೆಯಲ್ಲಿ ಭಾರತಕ್ಕೆ ಉಗ್ರರನ್ನು ಅಟ್ಟಲು ಹಾಗೂ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲು ಇನ್ನಷ್ಟುಸುರಂಗಗಳನ್ನು ಏನಾದರೂ ತೋಡಲಾಗಿದೆಯೇ ಎಂಬುದನ್ನು ಶೋಧಿಸಲು ಬೃಹತ್‌ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಕುತಂತ್ರಿ ಪಾಕ್ ಉದ್ಧಟತನ: ದೇಶಕ್ಕಾಗಿ ಪ್ರಾಣತೆತ್ತೆ ಇಬ್ಬರು ಯೋಧರು

ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿರುವ ಜಮ್ಮುವಿನ ಸಾಂಬಾ ವಲಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಪ್ರದೇಶದಲ್ಲಿ ಬಿಎಸ್‌ಎಫ್‌ ಯೋಧರು ಪಹರೆ ನಡೆಸುತ್ತಿದ್ದ ವೇಳೆ ಕೆಲ ಸ್ಥಳದಲ್ಲಿ ಮಣ್ಣು ಕುಸಿದಿತ್ತು. ಇದರಿಂದ ಅನುಮಾನಗೊಂಡ ಯೋಧರು, ಯಂತ್ರಗಳ ಮೂಲಕ ಸ್ಥಳದಲ್ಲಿ ಮಣ್ಣು ಹೊರ ತೆಗೆದಾಗ ಸುರಂಗ ಪತ್ತೆಯಾಗಿದೆ. ಈ ಸುರಂಗವು ಭಾರತ ಗಡಿ ಬೇಲಿಯಿಂದ ಕೇವಲ 50 ಮೀಟರ್‌ ದೂರದಲ್ಲಿದ್ದು, 20 ಮೀಟರ್‌ ಉದ್ದ ಹೊಂದಿದೆ. 25 ಅಡಿಯಷ್ಟುಆಳದ್ದಾಗಿದ್ದು ಇನ್ನೂ ನಿರ್ಮಾಣ ಹಂತದಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.