ಕರ್ತವ್ಯಪಥ: ನೇತಾಜಿಯ ಭವ್ಯ ಮೂರ್ತಿ ಕೆತ್ತಿದ್ದು ಕನ್ನಡಿಗ ಮೈಸೂರಿನ ಅರುಣ್ & ತಂಡ
ಇಂಡಿಯಾ ಗೇಟ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಗ್ರಾನೈಟ್ ಪ್ರತಿಮೆಯನ್ನು ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ತಂಡ. ಈ ಮೂರ್ತಿ ಕೆತ್ತನೆಗೆ ಶಿಲ್ಪಿಗಳ ತಂಡ ಬರೋಬ್ಬರಿ 26 ಸಾವಿರ ಮಾನವ ದಿನಗಳನ್ನು ವ್ಯಯ ಮಾಡಿದೆ.
ನವದೆಹಲಿ: ಇಂಡಿಯಾ ಗೇಟ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಗ್ರಾನೈಟ್ ಪ್ರತಿಮೆಯನ್ನು ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ತಂಡ. ಈ ಮೂರ್ತಿ ಕೆತ್ತನೆಗೆ ಶಿಲ್ಪಿಗಳ ತಂಡ ಬರೋಬ್ಬರಿ 26 ಸಾವಿರ ಮಾನವ ದಿನಗಳನ್ನು ವ್ಯಯ ಮಾಡಿದೆ.
ಸುಮಾರು 280 ಟನ್ ತೂಕವಿರುವ ಗ್ರಾನೈಟ್‌ನಿಂದ ಈ ಮೂರ್ತಿಯನ್ನು ತೆಲಂಗಾಣದ (Telangana) ಖಮ್ಮಮ್‌ನಲ್ಲಿ (Khammam) ಕೆತ್ತನೆ ಮಾಡಲಾಯಿತು. ಇದನ್ನು ದೆಹಲಿಗೆ ಸಾಗಿಸುವುದಕ್ಕಾಗಿ 100 ಅಡಿ ಉದ್ದದ 140 ಚಕ್ರ ಹಾಗೂ 14 ಆ್ಯಕ್ಸೆಲ್‌ಗಳುಳ್ಳ ವಿಶೇಷ ಲಾರಿಯನ್ನು ವಿನ್ಯಾಸ ಮಾಡಲಾಗಿತ್ತು. ಅಲ್ಲದೇ ಇದನ್ನು ಹೆದ್ದಾರಿಯವರೆಗೆ ಸಾಗಿಸಲು ವಿಶೇಷವಾದ ರಸ್ತೆಯನ್ನೂ ನಿರ್ಮಾಣ ಮಾಡಲಾಗಿತ್ತು. ಸುಮಾರು 1,665 ಕಿ.ಮೀ. ದೂರ ಸಾಗಿದ ಈ ಲಾರಿ ಸುರಕ್ಷಿತವಾಗಿ ಮೂರ್ತಿಯನ್ನು ದೆಹಲಿಗೆ ಸ್ಥಳಾಂತರಿಸಿತ್ತು.
ಮೂರ್ತಿಯ ವಿಶೇಷತೆ:
ಈ ಮೂರ್ತಿಯನ್ನು ಸಾಂಪ್ರದಾಯಿಕ ಕೌಶಲಗಳನ್ನು (traditional skills) ಬಳಸಿ ಕೆತ್ತನೆ ಮಾಡಲಾಗಿದೆ. ಇದೊಂದು ಏಕಾಶಿಲಾ ವಿಗ್ರಹವಾಗಿದ್ದು, ಕಪ್ಪು ಗ್ರಾನೈಟ್‌ನಲ್ಲಿ ಕೆತ್ತಲಾಗಿದೆ. ಈ ಮೂರ್ತಿ 28 ಅಡಿ ಎತ್ತರವಾಗಿದ್ದು, ಒಟ್ಟು 65 ಟನ್ ತೂಕವಿದೆ. ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ಪ್ರಯುಕ್ತ ಇಂಡಿಯಾ ಗೇಟ್‌ನಲ್ಲಿ ಅವರ ಮೂರ್ತಿ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಮೂರ್ತಿ ಸ್ಥಾಪನೆಯಾಗುವವರೆಗೂ ಇಂಡಿಯಾ ಗೇಟ್‌ನಲ್ಲಿ (India Gate )ಹಾಲೋಗ್ರಾಂ ತಂತ್ರಜ್ಞಾನದ (hologram technology) ಮುಖಾಂತರ ಬೋಸ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು.
ಕರ್ತವ್ಯ ಪಥ ಕಾರ್ಮಿಕರಿಗೆ ಗಣರಾಜ್ಯ ಕಾರ್ಯಕ್ರಮಕ್ಕೆ ಆಹ್ವಾನ
ನೇತಾಜಿ ಪುತ್ಥಳಿ ಅನಾವರಣ ಬಳಿಕ, ಕರ್ತವ್ಯಪಥ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕೆಲವು ಕಾರ್ಮಿಕರೊಂದಿಗೆ ಮೋದಿ ಕೆಲ ಕಾಲ ಸಂವಾದ ನಡೆಸಿದರು. ಜೊತೆಗೆ ನೀವು ಕೇವಲ ನಿರ್ಮಾಣದಲ್ಲಿ ಭಾಗಿಯಾಗಿಲ್ಲ, ಬದಲಾಗಿ ಇತರರಿಗೆ ಕರ್ತವ್ಯದ ಹಾದಿಯನ್ನು ತೋರಿಸಿದ್ದೀರಿ. ನಿಮ್ಮನ್ನು ಮುಂಬರುವ ಗಣರಾಜ್ಯೋತ್ಸವ (Republic Day program)ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ ಎಂದು ಭರವಸೆ ನೀಡಿದರು. ಗಣರಾಜ್ಯೋತ್ಸವ ಕಾರ್ಯಕ್ರಮ ಇದೇ ಕರ್ತವ್ಯಪಥದಲ್ಲಿ ಜ.26ರಂದು ನಡೆಯುತ್ತದೆ.
Left Right & Centre: ರಾಜಪಥ ಇನ್ಮುಂದೆ ಕರ್ತವ್ಯಪಥ! ಏನಿದರ ಮರ್ಮ?
ಇತ್ತ ನವೀಕೃತ ಕರ್ತವ್ಯಪಥ ಮತ್ತು ಕನ್ನಡಿಗ ಅರುಣ್ ನಿರ್ಮಿಸಿರುವ 28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಈ ಹಿಂದೆ ರಾಜಪಥವೆಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವಿನ ಸ್ಥಳದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಿದ್ದು, ದೇಶಕ್ಕೆ ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿದೆ. ಗುಲಾಮತನದ ಸಂಕೇತವಾಗಿದ್ದ ಕಿಂಗ್‌ವೇ ಅಥವಾ ರಾಜಪಥವನ್ನು ಇದೀಗ ಇತಿಹಾಸದ ಪುಟಗಳಿಗೆ ಸೇರಿಸಲಾಗಿದ್ದು, ಈ ಮೂಲಕ ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ತೋರಿಸಿದ ಪಥ ಅನುಸರಿಸಿದ್ದರೆ ಪ್ರಗತಿಯಲ್ಲಿ ಭಾರತ ಈ ವೇಳೆಗಾಗಲೇ ಇನ್ನೂ ಔನ್ನತ್ಯಕ್ಕೇರಿರುತ್ತಿತ್ತು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜಪಥವನ್ನು ಕರ್ತವ್ಯಪಥವಾಗಿ ಬದಲಾಯಿಸುವ ಮೂಲಕ ಬ್ರಿಟಿಷರ ಆಡಳಿತದ ಗುಲಾಮತನಕ್ಕೆ ಸಾಕ್ಷಿಯಾಗಿದ್ದ ಸಂಕೇತವನ್ನು ಇತಿಹಾಸದ ಪುಟಗಳಿಗೆ ಸರಿಸಲಾಗಿದೆ ಎಂದು ಹೇಳಿದರು.
ಹೊಸ ಕರ್ತವ್ಯಪಥ ಮತ್ತು ನೇತಾಜಿ ಪ್ರತಿಮೆಯಲ್ಲಿ ದೇಶದ ಜನತೆ ಭಾರತದ ಭವಿಷ್ಯವನ್ನು ಕಾಣಲಿದ್ದು, ಅದ್ಭುತ ಭಾರತ ಕಟ್ಟುವ ಶಕ್ತಿಯನ್ನು ಅವರಲ್ಲಿ ತುಂಬಲಿದೆ. ಕರ್ತವ್ಯ ಪಥ ನಮ್ಮಲ್ಲರಿಗೂ ದೇಶ ಮೊದಲು ಎಂಬುದನ್ನು ನೆನಪಿಸಲಿದೆ. ದೇಶದ ಜನತೆಗೆ ತಮ್ಮ ಹೊಣೆಗಾರಿಕೆಯನ್ನು ನೆನಪಿಸಲಿದೆ. ಯುದ್ಧ ಸ್ಮಾರಕ ಮತ್ತು ಸರ್ದಾರ್ ಪಟೇಲರ ಏಕತಾ ಪ್ರತಿಮೆಗಳು ಸಾಂಸ್ಕೃತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉದಾಹರಣೆ ಎಂದು ಬಣ್ಣಿಸಿದರು.
News Hour: ಗುಲಾಮಗಿರಿಯ ಕುರುಹು ಅಳಿಸಿದ ಮೋದಿ ಕನಸಿನ ಯೋಜನೆಯ ಲೋಕಾರ್ಪಣೆ!
‘ಇಂದು ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪುತ್ಥಳಿಯನ್ನು ಇಂಡಿಯಾ ಗೇಟ್ ಬಳಿ ಅಳವಡಿಸಿದ್ದೇವೆ. ಈ ಹಿಂದೆ ಬ್ರಿಟಿಷರ ಪ್ರತಿನಿಧಿಯೊಬ್ಬರ ಪ್ರತಿಮೆ ಇಲ್ಲಿ ಸ್ಥಾಪನೆಯಾಗಿತ್ತು. ಇದೀಗ ನೇತಾಜಿ ಪುತ್ಥಳಿ ಸ್ಥಾಪನೆಯೊಂದಿಗೆ ನಾವು ಸಬಲೀಕರಣಗೊಂಡ ಭಾರತದ ಹೊಸ ಪಥವನ್ನು ಸ್ಥಾಪಿಸಿದ್ದೇವೆ. ಕಳೆದ 8 ವರ್ಷಗಳಲ್ಲಿ ನಾವು ನೇತಾಜಿ ಅವರ ಆದರ್ಶ ಮತ್ತು ಕನಸುಗಳನ್ನು ಒಳಗೊಂಡ ಹಲವು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಈ ಬದಲಾವಣೆಗಳು ಕೇವಲ ಸಂಕೇತಗಳಾಗಿ ಉಳಿದಿಲ್ಲ, ಬದಲಾಗಿ ಅವು ನಮ್ಮ ನೀತಿಯ ಭಾಗವಾಗಿದೆ. ನೇತಾಜಿ ತೋರಿಸಿದ್ದ ಪಥದಲ್ಲಿ ಭಾರತ ಸಾಗಿದ್ದರೆ ದೇಶ ಇನ್ನೂ ಪ್ರಗತಿ ಸಾಧಿಸುತ್ತಿತ್ತು. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ ಅಖಂಡ ಭಾರತದ ಮೊದಲ ಮುಖ್ಯಸ್ಥರವರು. ವಿಷಾದವೆಂದರೆ ಅವರನ್ನು ಈ ದೇಶ ಮರೆತಿತ್ತು. ಆದರೆ ಇದೀಗ ಕರ್ತವ್ಯಪಥದಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದ್ದು, ಅದು ನಮಗೆ ಸ್ಫೂರ್ತಿ ನೀಡುವ ಜೊತೆಗೆ ನಮಗೆ ಮಾರ್ಗದರ್ಶನ ನೀಡಲಿದೆ ಎಂದು ಮೋದಿ ಹೇಳಿದರು.