ಗುರು ನಾನಕ್ ಜಯಂತಿಗೂ ಮುನ್ನ ಸಿಕ್ತು ಗುಡ್‌ನ್ಯೂಸ್: ನ. 17ಕ್ಕೆ ತೆರೆಯಲಿದೆ Kartarpur Corridor!
* ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿ
* ನವೆಂಬರ್ 17ರಂದು ತೆರೆಯಲಿದೆ ಕರ್ತಾರ್‌ಪುರ್ ಸಾಹಿಬ್
ಚಂಡೀಗಢ(ನ.16): ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿಯೊಂದು ಲಭಿಸಿದೆ. ಹೌದು ಕರ್ತಾರ್‌ಪುರ್ ಸಾಹಿಬ್ ((Kartarpur Sahib Corridor) ನವೆಂಬರ್ 17ರಂದು ತೆರೆಯಲಿದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕು (Coronavirus/0 ಇಡೀ ವಿಶ್ವ, ಭಾರತವನ್ನು ಕಾಡುತ್ತಿದ್ದ ಸಂದರ್ಭದಲ್ಲಿ 2020ರ ಮಾರ್ಚ್‌ನಿಂದ ಮುಚ್ಚಲಾಗಿದೆ. ಈ ವಿಚಾರವಾಗಿ ನವೆಂಬರ್ 14ರಂದು ಪಂಜಾಬ್ ಬಿಜೆಪಿ ನಾಯಕರ ಒಂದು ನಿಯೋಗ ಪ್ರಧಾನಿ ಮೋದಿಯನ್ನು (PM Narendra Modi) ಭೇಟಿಯಾಗಿತ್ತು.
ಬಿಜೆಪಿ (BJP) ನಿಯೋಗದ ಈ ಸಭೆಗೂ ಒಂದು ದಿನ ಮೊದಲು, ಎಸ್‌ಜಿಪಿಸಿ ಅಧ್ಯಕ್ಷೆ ಬೀಬಿ ಜಾಗೀರ್ ಕೌರ್, ಶಿರೋಮಣಿ ಅಕಾಲಿದಳದ ನಾಯಕಿ ಮತ್ತು ಮಾಜಿ ಸಚಿವ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಈ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಇದನ್ನು ತೆರೆಯುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು.
ಟ್ವೀಟ್ ಮಾಡಿದ ಗೃಹ ಸಚಿವ ಅಮಿತ್ ಶಾ
ನವೆಂಬರ್ 19 ರಂದು ಶ್ರೀ ಗುರುನಾನಕ್ ದೇವ್‌ಜಿಯವರ (Guru nanak) ಪ್ರಕಾಶ್ ಉತ್ಸವವನ್ನು ಆಚರಿಸಲು ರಾಷ್ಟ್ರವು ಸಜ್ಜಾಗಿದೆ ಮತ್ತು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಪುನಃ ತೆರೆಯುವ ಸರ್ಕಾರದ ನಿರ್ಧಾರವು ರಾಷ್ಟ್ರದಾದ್ಯಂತ ಉತ್ಸಾಹ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ನಾಳೆ ನವೆಂಬರ್ 17 ರಿಂದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಮೋದಿ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ಶ್ರೀ ಗುರುನಾನಕ್ ದೇವ್ ಜಿ ಮತ್ತು ನಮ್ಮ ಸಿಖ್ ಸಮುದಾಯದ ಬಗ್ಗೆ ಮೋದಿ ಸರ್ಕಾರದ ಅಪಾರ ಗೌರವವನ್ನು ತೋರಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
19ರಂದು ಗುರುನಾನಕ್ ಜಯಂತಿ
ನವೆಂಬರ್ 19 ಸಿಖ್ ಗುರು ಗುರುನಾನಕ್ ಅವರ ಜನ್ಮದಿನವಾಗಿದೆ. ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು 2019 ರಲ್ಲಿ ಇದೇ ದಿನಾಂಕದಂದು ಉದ್ಘಾಟಿಸಲಾಯಿತು. ಅಂದರೆ, ಈ ಬಾರಿ ಅದರ ಎರಡನೇ ವಾರ್ಷಿಕೋತ್ಸವವೂ ಆಗಿದೆ. ಗುರುನಾನಕ್ ದೇವ್ ಅವರ 550 ನೇ ಜನ್ಮ ವಾರ್ಷಿಕೋತ್ಸವದ ಮುನ್ನಾದಿನದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ.
3 ಸಾವಿರ ಸಿಖ್ಖರಿಗೆ ತೀರ್ಥಯಾತ್ರೆಗೆ ಅನುಮತಿ ನೀಡಬಹುದು
ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, 3,000 ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಗುರುಪುರಬ್ ಆಚರಣೆಗಾಗಿ ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿ ನಿಡಬಹುದು. ಅಟ್ಟಾರಿ-ವಾಘಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ನವೆಂಬರ್ 17 ರಿಂದ 26 ರವರೆಗೆ ಪಾಕಿಸ್ತಾನದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಭಾರತ ಸರ್ಕಾರ 1,500 ಯಾತ್ರಿಕರಿಗೆ ಅವಕಾಶ ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಈ ಬಾರಿ, ಪ್ರಯಾಣಿಸುವವರಿಗೆ ಲಾಹೋರ್, ಹಸನ್ ಅಬ್ದಲ್, ಕರ್ತಾರ್‌ಪುರ ಮತ್ತು ಫಾರೂಕಾಬಾದ್‌ನ ನಂಕಾನಾ ಸಾಹಿಬ್ ಮತ್ತು ಗುರುದ್ವಾರಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.
ಸಿಖ್ ಅನುಯಾಯಿಗಳು ಈ ತೀರ್ಥಯಾತ್ರೆಗೆ ಏಕೆ ಭೇಟಿ ನೀಡುತ್ತಾರೆ?
ಕರ್ತಾರ್‌ಪುರ ಗ್ರಾಮವು ರವಿ ನದಿಯ ಪಶ್ಚಿಮ ದಂಡೆಯಲ್ಲಿದೆ. ಇಲ್ಲಿ ಶ್ರೀ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದರು. ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ ಸುಮಾರು 4.5 ಕಿಮೀ ದೂರದಲ್ಲಿದೆ.