ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,561 ಕೋಟಿ ರೂ ಅನುದಾನ, ಕಾಂಗ್ರೆಸ್‌ಗಿಂತ 9 ಪಟ್ಟು ಹೆಚ್ಚು; ಅಶ್ವಿನಿ ವೈಷ್ಣವ್!
ಕಾಂಗ್ರೆಸ್ ಕಾಲದಲ್ಲಿ ಪ್ರತಿ ವರ್ಷ ಬಜೆಟ್‌ನಲ್ಲಿ 850 ಕೋಟಿ ರೂಪಾಯಿ ಅನುದಾನ ನೀಡುತ್ತಿತ್ತು. ಆದರೆ ಮೋದಿ ಸರ್ಕಾರ ಈ ಬಾರಿ 7,561 ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ನೀಡಿದೆ. ಪ್ರಧಾನಿ ಮೋದಿ ಎಲ್ಲಾ ಇಲಾಖೆಯಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಈ ಕುರಿತು ರೈಲ್ವೇ ಸಚಿವ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನವದೆಹಲಿ(ಫೆ.03): ಕೇಂದ್ರ ಬಜೆಟ್ ಕುರಿತು ಪರ ವಿರೋಧಗಳು ಕೇಳಿಬರುತ್ತಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಇದು ದೂರದೃಷ್ಟಿ ಕೊರತೆಯ ಬಜೆಟ್, ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ ಮಾಡಲಾಗಿದೆ. 25 ಸಂಸದರು ಇದ್ದರೂ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ ಅನ್ನೋ ಆರೋಪಗಳನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಇದೀಗ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕರ್ನಾಟಕಕ್ಕೆ ಬಜೆಟ್‌ನಲ್ಲಿ ನೀಡಿರುವ ಅನುದಾನ ಕುರಿತು ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್, ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ್ದಾರೆ. 2009ರಿಂದ 2014ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಪ್ರತಿ ವರ್ಷ ಸರಾಸರಿ 850 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಈ ಬಾರಿ ಪ್ರಧಾನಿ ಮೋದಿ ಸರ್ಕಾರಕ್ಕೆ ಕರ್ನಾಟಕಕ್ಕೆ 7,561 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಪ್ರಮಾಣದ ಅನುದಾನ ಇದುವರೆಗೂ ನೀಡಿಲ್ಲ. ಬರೋಬ್ಬರಿ 9 ಪಟ್ಟು ಅಧಿಕ ಹಂಚಿಕೆಯನ್ನು ಕೇಂದ್ರ ಬಿಜೆಪಿ ನೀಡಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಇಲಾಖೆಯಲ್ಲೂ ಬದಲಾವಣೆ ಬಯಸುತ್ತಿದ್ದಾರೆ. ಸಾರಿಗೆಯಲ್ಲೂ ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಿದ್ದಾರೆ. ರೈಲ್ವೇ ಅಭಿವೃದ್ಧಿ, ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 55 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ಬ್ಲೂ ಪ್ರೀಂಟ್ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯನ್ನು ಬೇರೆ ರಾಜ್ಯಗಳಲ್ಲೂ ಬಳಸಿಕೊಳ್ಳುವ ಚಿಂತನೆ ಇದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕೇಂದ್ರ ಬಿಜೆಟ್‌ನಲ್ಲಿ ಕನ್ನಡಿಗರಿಗೆ ಮೋಸ: ಪ್ರಿಯಾಂಕ್ ಖರ್ಗೆ
ಭೂ ಸ್ವಾಧೀನ ಸೇರಿದಂತೆ ಎಲ್ಲ ಹಂತಗಳಲ್ಲೂ ರಾಜ್ಯ ಸರ್ಕಾರ ನೆರವು ನೀಡುತ್ತಿದೆ. ಹೀಗಾಗಿ ಅಭಿವೃದ್ಧಿಯ ವೇಗವೂ ಹೆಚ್ಚಾಗಿದೆ. ಇನ್ನು ರೈಲ್ವೆಗಳಲ್ಲಿ ಸ್ಥಳೀಯ ಆಹಾರ ನೀಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ರೈಲಿನ ಹಳೇ ಕೋಚ್ ಬದಲಾಯಿಸುತ್ತಿದ್ದೇವೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಮೆಟ್ರೋ ಯೋಜನೆ ನಿರ್ಧರಿಸಲಾಗಿದೆ. ನೂರು ಕಿಲೋಮೀಟರ್ ಅಂತರದಲ್ಲಿರುವ ಎರಡು ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸುವ ಚಿಂತನೆ ಇದೆ. ಇದಕ್ಕಾಗಿ ಈ ಈಗಾಗಲೇ ಮೊದಲ ಸುತ್ತಿನ ಚರ್ಚೆ ನಡೆಸಲಾಗಿದೆ. ಈ ಮೂಲಕ ಬೆಂಗಳೂರು, ಮೈಸೂರು, ಬೆಂಗಳೂರು ತುಮಕೂರು ಸೇರದಿಂತೆ ಹತ್ತಿರದ ನಗರಗಳಿಗೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Union Budget: ಕೇಂದ್ರದ ಬಜೆಟ್‌ಗೆ ಪರ-ವಿರೋಧ
ರಾಜ್ಯದ ಎಲ್ಲ ನಿರೀಕ್ಷೆಗೂ ಬಜೆಟ್‌ನಲ್ಲಿ ಸ್ಪಂದನೆ: ಸಿಎಂ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಹಾಕುವ ಎಲ್ಲಾ ಅಂಶಗಳಿದ್ದು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದ ಪ್ರಗತಿಪರ ಬಜೆಟ್ ಆಗಿದೆ. ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಅನ್ನು ಕೇಂದ್ರ ಸರ್ಕಾರವು ಮಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ. ಸ್ವಚ್ಛ ಭಾರತದಿಂದ ಹಿಡಿದು ಆರ್ಥಿಕ ಸುಧಾರಣೆಗಾಗಿ ದಿಟ್ಟಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಬಜೆಟ್‌ನಲ್ಲಿನ ಎಲ್ಲಾ ಯೊಜನೆಗಳಿಂದ ರಾಜ್ಯದ ಪಾಲು ಬರಲಿದೆ. ಎಂಎಸ್‌ಎಂಇ, ಜಲಜೀವನ್ ಮಿಷನ್, ಗ್ರಾಮೀಣಾಭಿವೃದ್ಧಿ, ಪ್ರಧಾನಮಂತ್ರಿ ಆವಾಸ್ ಯೋಜನೆ, ನಗರ ಮೂಲಸೌಕರ್ಯ ಸೇರಿದಂತೆ ಹಲವು ಯೋಜನೆಗಳಿಂದ ರಾಜ್ಯಕ್ಕೆ ಪಾಲು ದೊರೆಯಲಿದೆ ಎಂದು ತಿಳಿಸಿದರು.