ನವದೆಹಲಿ (ಮಾ.03): ಇಡೀ ಕಾಶ್ಮೀರ ಕಣಿವೆಯ ಮಿಲಿಟರಿ ಕಾರ್ಯಾಚರಣೆಯ ಹೊಣೆ ಹೊತ್ತಿರುವ ಭಾರತೀಯ ಸೇನೆಯ ಭಾಗವಾದ ಚಿನಾರ್‌ ಕೋರ್‌ ಅಥವಾ 15ನೇ ಕೋರ್‌ನ ಉಸ್ತುವಾರಿ (ಜಿಒಸಿ- ಜನರಲ್‌ ಆಫೀಸರ್‌ ಕಮಾಂಡಿಂಗ್‌) ಇದೀಗ ಕನ್ನಡಿಗೊಬ್ಬರಿಗೆ ಒಲಿದಿದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಅವರನ್ನು ಚಿನಾರ್‌ ಕೋರ್‌ನ ನೂತನ ಮುಖ್ಯಸ್ಥರಾಗಿ ನೇಮಿಸಲಾಗಿದ್ದು, ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.

ಭಾರತೀಯ ಸೇನೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಹಿರಿಮೆ ಹೊಂದಿರುವ ಬಿ.ಎಸ್‌.ರಾಜು ಅವರು ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಮಾಜಿ ವಿದ್ಯಾರ್ಥಿಯಾಗಿದ್ದು, ತಮಿಳುನಾಡಿನ ಡಿಫೆನ್ಸ್‌ ಸವೀರ್‍ಸಸ್‌ ಸ್ಟಾಫ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಬ್ರಿಟನ್‌ನ ರಾಯಲ್‌ ಕಾಲೇಜ್‌ ಆಫ್‌ ಡಿಫೆನ್ಸ್‌ ಕಾಲೇಜಿನಿಂದಲೂ ಪದವಿ ಪಡೆದುಕೊಂಡಿದ್ದಾರೆ.

370ನೇ ವಿಧಿ ರದ್ದಾಗಿದ್ದ ಕಾಶ್ಮೀರಕ್ಕೆ 371ನೇ ವಿಧಿ ಸ್ಥಾನಮಾನ!...

ತಮ್ಮ 36 ವರ್ಷಗಳ ಸೇವಾ ಅವಧಿಯಲ್ಲಿ ಬಿ.ಎಸ್‌.ರಾಜು ಅವರು ರಾಷ್ಟ್ರೀಯ ರೈಫಲ್ಸ್‌, ಇನ್‌ಫ್ಯಾಂಟ್ರಿ ಬ್ರಿಗೇಡ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಅಲ್ಲದೆ ದಕ್ಷಿಣ ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ರಚನೆಯಾಗಿದ್ದ ವಿಕ್ಟರ್‌ ಫೋರ್ಸ್‌ನ ಮುಖ್ಯಸ್ಥರಾಗಿ, ಗಡಿ ನಿಯಂತ್ರಣ ರೇಖೆಯಲ್ಲಿ ಬ್ರಿಗೇಡ್‌ ಕಮಾಂಡರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಚಿನಾರ್‌ ಕೋರ್‌ ಪಡೆ 1916ರಲ್ಲಿ ಬ್ರಿಟೀಷರ ಕಾಲದಲ್ಲಿ ರಚನೆಯಾಗಿದ್ದು, ನಾನಾ ಕಡೆಗಳಲ್ಲಿ ಕೇಂದ್ರ ಕಚೇರಿ ಹೊಂದಿತ್ತು, ಬಳಿಕ ವಿಸರ್ಜನೆಗೊಂಡಿತ್ತು. ಸ್ವಾತಂತ್ರ್ಯಾನಂತರ ಮತ್ತೆ ಹೊಸದಾಗಿ 1947ರಲ್ಲಿ ಪಡೆಯನ್ನು ರಚಿಸಲಾಗಿದ್ದು ಪ್ರಸಕ್ತ ಶ್ರೀನಗರದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಇಡೀ ಕಾಶ್ಮೀರ ಕಣಿವೆಯ ಮಿಲಿಟರಿ ಕಾರ್ಯಾಚರಣೆಯ ಹೊಣೆ ಈ ವಿಭಾಗದ್ದಾಗಿದೆ.