ಜಮ್ಮು[ಫೆ.23]: ಸಂವಿಧಾನದ 370ನೇ ವಿಧಿ ನಿಷ್ಕಿ್ರಯಗೊಂಡಿರುವ ಹಿನ್ನೆಲೆಯಲ್ಲಿ ಭೂಮಿ ಹಾಗೂ ಉದ್ಯೋಗ ಅವಕಾಶಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕಾಶ್ಮೀರಿಗಳ ಆತಂಕ ಹೋಗಲಾಡಿಸಲು ಶೀಘ್ರದಲ್ಲೇ ಕಾಯಂ ನಿವಾಸಿ ಕಾಯ್ದೆಯನ್ನು ತರಲಾಗುತ್ತದೆ. ಅದರ ಬೆನ್ನಲ್ಲೇ ಭೂ ಕಾಯ್ದೆಯನ್ನೂ ಅಂಗೀಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬಹುಷಃ ಇದು ವಿಶೇಷ ಪ್ರಕರಣಗಳಲ್ಲಿ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ಕಾರ್ಯಕ್ರಮವೊಂದರ ಬಳಿಕ ಶನಿವಾರ ಮಾತನಾಡಿದ ಪ್ರಧಾನಿ ಕಾರ್ಯಾಲಯ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌, ಕಾಶ್ಮೀರಿಗಳಿಗೆ ಭರವಸೆ ನೀಡಿರುವುದಕ್ಕಿಂತ ಹೆಚ್ಚಿನ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

370ನೇ ವಿಧಿಯನ್ನು ಕೇಂದ್ರ ಸರ್ಕಾರ ನಿಷ್ಕ್ರಿಯ ಮಾಡಿರುವುದರಿಂದ ಕಾಶ್ಮೀರಿ ಭೂ ಮಾಲೀಕರು ಹಾಗೂ ನಿರುದ್ಯೋಗಿಗಳ ಹಿತರಕ್ಷಣೆಗಾಗಿ ಕಾಯಂ ನಿವಾಸಿ ಕಾನೂನು ರೂಪಿಸಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಪಡಿಸಿದ್ದವು. 370ನೇ ವಿಧಿ ಅಸ್ತಿತ್ವದಲ್ಲಿದ್ದಾಗ ಹೊರಗಿನವರು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಹಾಗೂ ಉದ್ಯೋಗ ಪಡೆಯಲು ನಿರ್ಬಂಧ ಇತ್ತು. ಇದೀಗ 370ನೇ ವಿಧಿ ರದ್ದಾಗಿರುವುದರಿಂದ ಯಾರು ಬೇಕಾದರೂ ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು, ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂಬ ಆತಂಕ ಕಾಶ್ಮೀರಿಗಳನ್ನು ಕಾಡುತ್ತಿದೆ.