ಕರ್ನಾಟಕದ ಕಾಂಗ್ರೆಸ್‌  ಮುಖಂಡರು  ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ವರದಿ : ಆತ್ಮಭೂಷಣ್‌

 ಮಂಗಳೂರು (ಮೇ.05): ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌(ಯುಡಿಎಫ್‌) ಅನ್ನು ಅಧಿಕಾರಕ್ಕೆ ತರಲಾಗದಿದ್ದರೂ ಪಕ್ಷದ ಮಾನ ಉಳಿಸಿಕೊಡುವಲ್ಲಿ ಇಬ್ಬರು ಕನ್ನಡಿಗ ಉಸ್ತುವಾರಿಗಳು ಸಫಲರಾಗಿದ್ದಾರೆ. ತಾವು ಪ್ರಚಾರ ನಡೆಸಿದ ಕಡೆ ಹಿಂದಿನ ಸ್ಥಾನ ಉಳಿಸಿಕೊಳ್ಳುವ ಜೊತೆಗೆ ತುಸು ಹೆಚ್ಚುವರಿ ಸ್ಥಾನ ಗಳಿಸಿಕೊಡುವಲ್ಲಿ ಉಸ್ತುವಾರಿ ವಹಿಸಿರುವ ದ.ಕ. ಮೂಲದ ಇಬ್ಬರು ಎಐಸಿಸಿ ಕಾರ್ಯದರ್ಶಿಗಳು ಯಶಸ್ವಿಯಾಗಿದ್ದಾರೆ.

ಎಐಸಿಸಿ ಕಾರ್ಯದರ್ಶಿಗಳಾದ ಐವನ್‌ ಡಿಸೋಜಾ ಹಾಗೂ ಪಿ.ವಿ.ಮೋಹನ್‌ ಅವರಿಗೆ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಕಾಂಗ್ರೆಸ್‌ ಹೈಕಮಾಂಡ್‌ ಕೇರಳ ಉಸ್ತುವಾರಿ ನೀಡಿತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಐವನ್‌ ಡಿಸೋಜಾ ಅವರಿಗೆ ಮಧ್ಯ ಕೇರಳ ಜವಾಬ್ದಾರಿ ನೀಡಿದರೆ, ಪಿ.ವಿ.ಮೋಹನ್‌ಗೆ ಉತ್ತರ ಕೇರಳದ ಹೊಣೆಗಾರಿಕೆ ನೀಡಲಾಗಿತ್ತು.

 ಮಧ್ಯ ಕೇರಳದಲ್ಲಿ 7 ಹೆಚ್ಚುವರಿ ಸೀಟು

2016ರ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ ಮಧ್ಯ ಕೇರಳದಲ್ಲಿ ಕಾಂಗ್ರೆಸ್‌ ಈ ಬಾರಿ ಚೇತರಿಕೆ ಕಂಡಿದೆ. ಐವನ್‌ ಡಿಸೋಜಾ ಉಸ್ತುವಾರಿ ವ್ಯಾಪ್ತಿಯ ಮಧ್ಯ ಕೇರಳದ ಐದು ಜಿಲ್ಲೆಗಳಾದ ಎರ್ನಾಕುಲಂ, ಕೊಟ್ಟಾಯಂ, ಇಡುಕ್ಕಿ, ತ್ರಿಶ್ಶೂರು ಹಾಗೂ ಪಟ್ಟಣಂತಿಟ್ಟಗಳಲ್ಲಿರುವ 46 ಸೀಟುಗಳ ಪೈಕಿ ಕಳೆದ ಬಾರಿ ಕಾಂಗ್ರೆಸ್‌ ಕೇವಲ 9 ಸೀಟು ಗೆದ್ದಿತ್ತು. ಈ ಬಾರಿ 16ಕ್ಕೇರಿಕೆಯಾಗಿದೆ.

ಉತ್ತರ ಕೇರಳದಲ್ಲಿ ಪಕ್ಷಕ್ಕೆ ಹಿನ್ನಡೆ ಇಲ್ಲ

ಪಿ.ವಿ.ಮೋಹನ್‌ ಉಸ್ತುವಾರಿಯ ಉತ್ತರ ಕೇರಳದಲ್ಲಿ ಸೀಟುಗಳ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇಲ್ಲಿ ಕಾಸರಗೋಡು, ಕಣ್ಣೂರು, ಕ್ಯಾಲಿಕಟ್‌, ಮಲಪ್ಪುರಂ, ವೈನಾಡ್‌, ಪಾಲಕ್ಕಾಡ್‌ಗಳಲ್ಲಿ ಆರರಲ್ಲಿ ಆರು ಸೀಟನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ. ತಿರ್ತಲಾದಲ್ಲಿ ಒಂದು ಸೀಟು ಕಳೆದುಕೊಂಡರೆ, ಕಲ್ಕಟ್ಟದಲ್ಲಿ ಒಂದು ಸೀಟು ಕಾಂಗ್ರೆಸ್‌ಗೆ ಬಂದಿದೆ. ಕಳೆದ ಬಾರಿಯೂ ಉತ್ತರ ಕೇರಳದಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಆರೇ ಸೀಟು.

ಎಡ-ಬಲ ಒಳಒಪ್ಪಂದ

ಕೇರಳ ಚುನಾವಣೆಯಲ್ಲಿ ಈ ಬಾರಿ ಎಲ್‌ಡಿಎಫ್‌ ಹಾಗೂ ಎನ್‌ಡಿಎ ನಡುವೆ ಒಳ ಒಪ್ಪಂದ ಆಗಿದೆ. ಇವರ ನಡುವೆ ಮತ ಹಂಚಿಕೆ ನಡೆದ ಕಾರಣ ಕಾಂಗ್ರೆಸ್‌ಗೆ ಸೋಲಾಗಿದೆ. ಈ ವಿಚಾರವನ್ನು ಟ್ವೀಟ್‌ ಮೂಲಕ ಕಾಂಗ್ರೆಸ್‌ನ ಹೈಕಮಾಂಡ್‌ ಗಮನಕ್ಕೆ ತರಲಾಗಿದೆ.

-ಪಿ.ವಿ.ಮೋಹನ್‌, ಕೇರಳ ಉಸ್ತುವಾರಿ(ಕೇರಳ ಉತ್ತರ)

ದಕ್ಷಿಣ ಕೇರಳ ಹೊಡೆತ: ಕಾಂಗ್ರೆಸ್‌ಗೆ ತೀವ್ರ ಹೊಡೆತ ಸಿಕ್ಕಿರುವುದು ದಕ್ಷಿಣ ಕೇರಳದಲ್ಲಿ. ತಿರುವನಂತಪುರಂ, ಅಲೆಪ್ಪಿ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ 14 ಸೀಟುಗಳ ಪೈಕಿ ಗೆದ್ದಿರುವುದು ಒಂದೇ ಸೀಟು. ಕೆಪಿಸಿಸಿ ಕಾರ್ಯದರ್ಶಿ ವಿಶ್ವನಾಥನ್‌ ಇಲ್ಲಿನ ಉಸ್ತುವಾರಿ ಹೊಂದಿದ್ದರು.

ರಾಹುಲ್‌ ಪ್ರಚಾರ: ಕೇರಳ ರಾಜ್ಯ ಚುನಾವಣೆಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಸುಮಾರು 70 ಅಸೆಂಬ್ಲಿ ಕ್ಷೇತ್ರಗಳನ್ನು ಸಂಪರ್ಕಿಸುವಂತೆ ಪ್ರಚಾರ ನಡೆಸಿದ್ದರು. ಉಸ್ತುವಾರಿ ಐವನ್‌ ಡಿಸೋಜಾ ಅವರು ನಿರಂತರ 109 ದಿನ ಮೊಕ್ಕಾಂ ಹೂಡಿ ಮಧ್ಯ ಕೇರಳ ಸುತ್ತಾಡಿದ್ದರು. ಇದೇ ರೀತಿ ಪಿ.ವಿ.ಮೋಹನ್‌ ಕೂಡ ಪಕ್ಷ ಗೆಲುವಿಗೆ ಇನ್ನಿಲ್ಲದ ಶ್ರಮ ವಹಿಸಿದ್ದರು. ಆದರೂ ಕಾಂಗ್ರೆಸ್‌ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಎಲ್‌ಡಿಎಫ್‌, ಯುಡಿಎಫ್‌ ನಡುವೆ ಅಧಿಕಾರ ಬದಲಾಗುತ್ತಿರುವ ವಾತಾವರಣ ಈ ಬಾರಿಯೂ ಬರಬಹುದು ಎಂಬ ಕಾಂಗ್ರೆಸ್‌ ನಾಯಕರ ನಿರೀಕ್ಷೆಯನ್ನು ಫಲಿತಾಂಶ ಹುಸಿ ಮಾಡಿದೆ.

ಕೇರಳ ಕಾಂಗ್ರೆಸ್‌ನಲ್ಲಿರುವ ಬಣರಾಜಕೀಯ ಹಾಗೂ ಕೋವಿಡ್‌ ವೇಳೆ ಸಿಪಿಎಂ ಕಾರ್ಯಕರ್ತರು ಜನತೆಗೆ ಸಹಕಾರ ನೀಡಿರುವುದು ಎಲ್‌ಡಿಎಫ್‌ ಮರಳಿ ಅಧಿಕಾರ ಪಡೆಯುವಲ್ಲಿ ಸಹಕಾರಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಲೆಪ್ಪಿಯ 13 ಕ್ಷೇತ್ರ ಪೈಕಿ ಒಂದರಲ್ಲಿ ಮಾತ್ರ ಕಾಂಗ್ರೆಸ್‌ ಮುಖಂಡ ರಮೇಶ್‌ ಚೆನ್ನಿತ್ತಲ ಗೆದ್ದಿದ್ದಾರೆ. ಬೇರೆ ಎಲ್ಲ ಕಡೆ ಯುಡಿಎಫ್‌ ಸೋಲು ಕಂಡಿತ್ತು. ಕಳೆದ ಬಾರಿ ಕೇವಲ 3 ಸೀಟು ಮಾತ್ರ ಇಲ್ಲಿ ಗೆದ್ದಿತ್ತು. ಕಾಂಗ್ರೆಸ್‌ನ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮತಗಳು ಈ ಬಾರಿ ಬಿಜೆಪಿ ಗೆಲ್ಲಬಹುದು ಎಂಬ ಭೀತಿಯಿಂದ ಎಲ್‌ಡಿಎಫ್‌ಗೆ ಹಂಚಿಕೆಯಾಗಿದೆ. ಇದು ಕಾಂಗ್ರೆಸ್‌ ಸೋಲಿಗೆ ಮುಖ್ಯ ಕಾರಣ ಎಂದು ಉಸ್ತುವಾರಿ ಪಿ.ವಿ.ಮೋಹನ್‌ ಹೇಳುತ್ತಾರೆ.

ಒಟ್ಟಾರೆ ಕೇರಳದಲ್ಲಿ ಈ ಬಾರಿ ಎಲ್‌ಡಿಎಫ್‌ 99, ಯುಡಿಎಫ್‌ 41, ಇದರಲ್ಲಿ ಕಾಂಗ್ರೆಸ್‌ 22 ಸ್ಥಾನ ಗೆದ್ದುಕೊಂಡಿದೆ. ಕಳೆದ ಬಾರಿ 21 ಸ್ಥಾನ ಗೆದ್ದಿತ್ತು. ಅಂದರೆ, ಐದು ವರ್ಷಗಳಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಆಗಿರುವುದು ಬರೇ ಒಂದು ಸ್ಥಾನ.