Asianet Suvarna News Asianet Suvarna News

6 ರಾಜ್ಯಗಳಿಗೆ ಹಬ್ಬಿದ ಹಿಜಾಬ್‌ ವಿವಾದ: ಮುಸ್ಲಿಂ ಸ್ತ್ರೀಯರ ದಿಕ್ಕು ತಪ್ಪಿಸಲೆತ್ನ ಎಂದ ಪ್ರಧಾನಿ ಮೋದಿ!

*ಬಿಜೆಪಿ ಪ್ರತಿ ಮುಸ್ಲಿಂ ಸಂತ್ರಸ್ತ ಮಹಿಳೆ ಪರ
*ಹಿಜಾಬ್‌ ವಿವಾದದ ಸಂದರ್ಭದಲ್ಲೇ ಪ್ರಧಾನಿ ಹೇಳಿಕೆ
*ದೆಹಲಿಯ ಕರ್ನಾಟಕ ಭವನದೆದುರು ಪ್ರತಿಭಟನೆ ಯತ್ನ
 

Karnataka hijab row people are finding new ways to block Muslim women rights says PM Narendar Modi mnj
Author
Bengaluru, First Published Feb 11, 2022, 8:53 AM IST | Last Updated Feb 11, 2022, 8:53 AM IST

ಸಹಾರನ್‌ಪುರ (ಉ.ಪ್ರ.): ‘ಬಿಜೆಪಿ ಪ್ರತಿ ಮುಸ್ಲಿಂ ಸಂತ್ರಸ್ತ ಮಹಿಳೆ ಪರ ನಿಲ್ಲುತ್ತದೆ. ಆದರೆ ಪ್ರತಿಪಕ್ಷಗಳು ಅವರ ದಿಕ್ಕು ತಪ್ಪಿಸುತ್ತಿವೆ. ಮುಸ್ಲಿಂ ಮಹಿಳೆಯರ ಹಕ್ಕು, ಅವರ ಆಸೆಗಳಿಗೆ ಪ್ರತಿಪಕ್ಷಗಳು ಅಡ್ಡಿ ಉಂಟು ಮಾಡುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ್ದಾರೆ.ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಒಳ್ಳೆಯ ಯೋಜನೆ ಹಾಗೂ ಅನುಕೂಲತೆ ಕಲ್ಪಿಸಿದ್ದನ್ನು ಸಹಿಸದ ವಿಪಕ್ಷಗಳು ಈ ರೀತಿಯ ಕೃತ್ಯ ಎಸಗುತ್ತಿವೆ ಎಂದೂ ಅವರು ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್‌ ವಿವಾದ ಎದ್ದಿರುವ ನಡುವೆಯೇ ಪ್ರಧಾನಿಯವರ ಈ ಹೇಳಿಕೆ ಬಂದಿದೆ.

ಉತ್ತರ ಪ್ರದೇಶದ ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಬಂದ ನಂತರ ತ್ರಿವಳಿ ತಲಾಖ್‌ ನಿರ್ಬಂಧಿಸಿತು. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗುವಂತೆ ನೋಡಿಕೊಂಡಿತು. ಹೀಗಾಗಿಯೇ ಮುಸ್ಲಿಂ ಸಮುದಾಯದಲ್ಲಿ ಮೋದಿ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಆದರೆ ಯಾವಾಗ ಮುಸ್ಲಿಂ ಸೋದರಿಯರು ಮೋದಿಯನ್ನು ಹೊಗಳಲು ಆರಂಭಿಸಿದರೋ, ಅವರನ್ನು ತಡೆಯಬೇಕು ಎಂಬ ಯತ್ನವನ್ನು ವಿಪಕ್ಷಗಳು ಆರಂಭಿಸಿದವು. ಇದರ ಭಾಗವಾಗಿ, ವಿಪಕ್ಷಗಳೀಗ ಮಸ್ಲಿಂ ಮಹಿಳೆಯರ ಹಕ್ಕು ಹಾಗೂ ಆಕಾಂಕ್ಷೆಗಳಿಗೆ ಅಡ್ಡಿ ಮಾಡಲು ಆರಂಭಿಸಿದವು’ ಎಂದರು.

ಇದನ್ನೂ ಓದಿ: Karnataka Hijab Row: ಭಾರತದ ರಾಯಭಾರಿ ಕರೆಸಿ ಅಸಮಾಧಾನ ಹೊರ ಹಾಕಿದ ಪಾಕಿಸ್ತಾನ!

- ತ್ರಿವಳಿ ತಲಾಖ್‌ ನಿರ್ಬಂಧಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇವೆ

- ಮುಸಲ್ಮಾನ ಸಮುದಾಯದಲ್ಲಿ ಮೋದಿ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ

- ಮುಸ್ಲಿಂ ಸೋದರಿಯರು ಮೋದಿಯನ್ನು ಹೊಗಳುತ್ತಿದ್ದಾರೆ. ಅದಕ್ಕೆ ವಿಪಕ್ಷಗಳ ಅಡ್ಡಿ

- ಹೀಗಾಗಿ ಮುಸ್ಲಿಂ ಮಹಿಳೆಯರ ಹಕ್ಕು, ಆಕಾಂಕ್ಷೆಗಳಿಗೆ ತೊಡಕಾಗುವ ಪ್ರಯತ್ನ

- ಉತ್ತರಪ್ರದೇಶದ ಚುನಾವಣಾ ರಾರ‍ಯಲಿಯಲ್ಲಿ ನರೇಂದ್ರ ಮೋದಿ ಟೀಕಾಪ್ರಹಾರ

6 ರಾಜ್ಯಗಳಿಗೆ ಹಬ್ಬಿದ ಹಿಜಾಬ್‌ ವಿವಾದ: ಕರ್ನಾಟಕದ ಉಡುಪಿಯಲ್ಲಿ ಮೊದಲಿಗೆ ಆರಂಭವಾದ ಹಿಜಾಬ್‌ ವಿವಾದ ದಿನೇ ದಿನೇ ಇತರೆ ರಾಜ್ಯಗಳಿಗೂ ಹಬ್ಬುತ್ತಿದ್ದು, ದೇಶವ್ಯಾಪಿಯಾಗುವ ಆತಂಕ ಕಾಡಿದೆ. ಹಿಜಾಬ್‌ ಬೆಂಬಲಿಸಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಪುದುಚೇರಿ, ದೆಹಲಿಯಲ್ಲಿ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಜೊತೆಗೆ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ:Hijab Row: ಹಿಜಾಬ್‌-ಕೇಸರಿ ಶಾಲು ಗಲಾಟೆ ಮೂರ್ಖತನದ್ದು: ಹೊರಟ್ಟಿ

ಹಲವೆಡೆ ಪ್ರತಿಭಟನೆ: ಕೋಲ್ಕತಾದ ಅಲಿಯಾ ವಿವಿ ವಿದ್ಯಾರ್ಥಿಗಳು ಮುಸ್ಲಿಮರಿಗೆ ಅವರ ಧರ್ಮ ಪಾಲಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಮುಂಬೈ ಮತ್ತು ಥಾಣೆಯಲ್ಲೂ ವಿದ್ಯಾರ್ಥಿಗಳು ಹಿಜಾಬ್‌ ನಮ್ಮ ಆಭರಣ, ಇದನ್ನು ವಿರೋಧಿಸುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷ ಹಿಜಾಬ್‌ಗೆ ಬೆಂಬಲ ಸೂಚಿಸುವಂತಹ ಪ್ರಾತ್ಯಕ್ಷಿಕೆ ಪ್ರದರ್ಶಿಸಿದೆ.

ಹೈದರಾಬಾದ್‌ನಲ್ಲೂ ಸಹ ವಿದ್ಯಾರ್ಥಿಗಳು ಹಿಜಾಬ್‌ನ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್‌ ಅವರ ಮಗಳು ಕವಿತಾ ಅವರು ಮಹಿಳೆಯರಿಗೆ ಏನು ಹಿತಕರವಾಗುತ್ತದೋ ಅದನ್ನು ಧರಿಸುವ ಅವಕಾಶ ನೀಡಿ ಎಂದು ಹಿಜಾಬ್‌ ಪರ ವಹಿಸಿದ್ದಾರೆ. ತಮಿಳುನಾಡು, ಪುದುಚೆರಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಭವನದೆದುರು ಪ್ರತಿಭಟನೆ ಯತ್ನ: ಮತ್ತೊಂದೆಡೆ ದೆಹಲಿಯ ಕರ್ನಾಟಕ ಭವನದ ಮುಂದೆ ಹಿಜಾಬ್‌ ಪರ ಪ್ರತಿಭಟನೆ ಯತ್ನ ನಡೆಸಲಾಗಿದೆ. ಎಐಎಸ್‌ಎ ಸಂಘಟನೆಯ ಕಾರ್ಯಕರ್ತರು ಮತ್ತು ದೆಹಲಿಯ ಜೆಎನ್‌ಯುನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಕರ್ನಾಟಕ ಭವನದ ಸಮೀಪ ಆಗಮಿಸುತ್ತಲೇ, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಪೊಲೀಸರು ವಶಕ್ಕೆ ಪಡೆಯುವ ಸಮಯದಲ್ಲಿ ಪ್ರತಿಭಟನಾಕಾರರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆಗಳನ್ನು ಕೂಗಿದರು.

Latest Videos
Follow Us:
Download App:
  • android
  • ios