Asianet Suvarna News Asianet Suvarna News

Religious Conversion: ಕಠಿಣ ಕಾಯ್ದೆ ಜಾರಿಗೆ ಮುಂದಾದ ರಾಜ್ಯ ಸರ್ಕಾರ: ಬಲವಂತದ ಮತಾಂತರಕ್ಕೆ 10 ವರ್ಷ ಜೈಲು?

*ಕಠಿಣ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರದ ಕರಡು ವರದಿ ಸಿದ್ಧ
*ಬಲವಂತದ ಮತಾಂತರಕ್ಕೆ 10 ವರ್ಷ ಜೈಲುಶಿಕ್ಷೆ!
*ಬೆಳಗಾವಿ ಕಲಾಪದಲ್ಲಿ ಮಂಡನೆಗೆ ಚಿಂತನೆ
*ಮತಾಂತರ ಆಗುವವರು/ ಮಾಡುವವರು ಮೊದಲೇ ಡೀಸಿಗೆ ತಿಳಿಸಬೇಕು
*ಮದುವೆ ಉದ್ದೇಶದಿಂದ ಮತಾಂತರ ಆದರೆ ಅಸಿಂಧು
 

Karnataka Government proposes 10 years imprisonment for Forced Religious conversion mnj
Author
Bengaluru, First Published Dec 11, 2021, 6:47 AM IST

ಬೆಂಗಳೂರು(ಡಿ. 11): ಬಲವಂತ, ಆಮಿಷ ಅಥವಾ ವಂಚಿಸಿ ಮತಾಂತರ ಮಾಡುವವರಿಗೆ ಕನಿಷ್ಠ (Forced Religious Conversion) 1ರಿಂದ ಗರಿಷ್ಠ 10 ವರ್ಷಗಳ ಶಿಕ್ಷೆ ಮತ್ತು ದಂಡ, ಮತಾಂತರಗೊಳ್ಳುವ ವ್ಯಕ್ತಿ ಮೊದಲೇ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು (Information) ಸೇರಿದಂತೆ ಹಲವು ಕಠಿಣ ಅಂಶಗಳಿರುವ ಮತಾಂತರ ನಿಷೇದ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಕರಡು ಮಸೂದೆ ಸಿದ್ಧಪಡಿಸಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯನ್ನು ಅಧ್ಯಯನ ಮಾಡಿ, ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು, ಕಾನೂನು ತಜ್ಞರು (Law Experts) ಮಸೂದೆ ಮಂಡನೆಗೆ ಮುನ್ನ ಎಲ್ಲ ಆಯಾಮಗಳಿಂದ ಪರಿಶೀಲಿಸುತ್ತಿದ್ದಾರೆ.

ವಿಧೇಯಕದಲ್ಲಿ ಏನಿದೆ?:

ಬಲವಂತ, ಆಮಿಷ ಅಥವಾ ವಂಚಿಸಿ ಮತಾಂತರ ಮಾಡುವರಿಗೆ ಜೈಲು ಶಿಕ್ಷೆ, ಹೆಚ್ಚಿನ ದಂಡವನ್ನು ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇಂತಹ ಕೃತ್ಯ ಎಸಗುವ ವ್ಯಕ್ತಿಗೆ ಜಾಮೀನು ನಿರಾಕರಿಸಬೇಕು, ಯಾವುದೇ ವ್ಯಕ್ತಿ ಮತಾಂತರಗೊಳ್ಳುವ ಮುನ್ನ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಮೊದಲೇ ನೋಟಿಸ್‌ ನೀಡಬೇಕು, ಅದೇ ರೀತಿ ಮತಾಂತರ ಮಾಡುವ ಧಾರ್ಮಿಕ ವ್ಯಕ್ತಿ ಮತಾಂತರ ಮಾಡುವ ಮುನ್ನ/ ಮತಾಂತರ ಮಾಡಿದ ನಂತರ ಸಕ್ಷಮ ಪ್ರಾಧಿಕಾರಕ್ಕೆ ಗಮನಕ್ಕೆ ತರಬೇಕು, ಕೇವಲ ಮದುವೆಯಾಗುವ ಉದ್ದೇಶದಿಂದ ನಡೆದ ಮತಾಂತರ ಅಸಿಂಧುಗೊಳಿಸುವ ಅಂಶಗಳನ್ನು ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Religious Conversion: ಮತಾಂತರ ನಿಷೇಧ ಮಸೂದೆಗೆ ವಿರೋಧ: ಡಿಕೆಶಿ

ಮತಾಂತರಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿ, ಮತಾಂತರವನ್ನು ಸರ್ಕಾರ ನಿಗದಿಪಡಿಸಿದ ಕಾನೂನಿನ ಪ್ರಕಾರ ಮಾಡದೇ ಇದ್ದರೆ ಅಂತಹವರಿಗೆ ಜೈಲು ಹಾಗೂ ದಂಡ ವಿಧಿಸುವ ಅಂಶವನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಅಲ್ಲದೆ, ಮತಾಂತರಗೊಂಡವರಿಗೂ ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ. ಆಮಿಷ ಒಡ್ಡಿ ಮತಾಂತರ ಮಾಡಿದವರಿಗೆ 1ರಿಂದ 5 ವರ್ಷ ಶಿಕ್ಷೆ, ಬಲವಂತದಿಂದ ಮಹಿಳೆ, ಅಪ್ರಾಪ್ತ, ಪರಿಶಿಷ್ಟರನ್ನು ಮತಾಂತರ ಮಾಡಿದರೆ ಗರಿಷ್ಠ 10 ವರ್ಷ ಶಿಕ್ಷೆ ನೀಡುವುದು. ಬಲವಂತವಾಗಿ ಮತಾಂತರ ಆಗಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಮತಾಂತರಗೊಂಡ ವ್ಯಕ್ತಿ ಹೊಂದಿರುತ್ತಾನೆ, ಒಂದು ವೇಳೆ ಮತಾಂತರ ಬಲವಂತವಾಗಿ ಆಗಿದೆ ಎಂಬ ದೂರು ಬಂದಂತಹ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರ ಪೊಲೀಸ್‌ ತನಿಖೆಗೆ ಒಪ್ಪಿಸುವ ಅಂಶ ಒಳಗೊಂಡ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕರಡು ಮಸೂದೆಯಲ್ಲಿಇರುವ ಅಂಶಗಳೇನು?

- ಮತಾಂತರಗೊಳ್ಳುವ/ಮಾಡುವ ವ್ಯಕ್ತಿ ಮೊದಲೇ ಸರ್ಕಾರಕ್ಕೆ ತಿಳಿಸಬೇಕು

- ಬಲವಂತ, ಆಮಿಷ, ವಂಚಿಸಿ ಮತಾಂತರ ಮಾಡಿದರೆ 1-10 ವರ್ಷ ಶಿಕ್ಷೆ

- ಮದುವೆಯಾಗುವ ಉದ್ದೇಶದಿಂದ ಮತಾಂತರವಾದರೆ ಅಸಿಂಧು ಸಾಧ್ಯತೆ

- ಸ್ತ್ರೀ, ಅಪ್ರಾಪ್ತ, ಪರಿಶಿಷ್ಟರನ್ನು ಅಕ್ರಮವಾಗಿ ಮತಾಂತರ ಮಾಡಿದರೆ ಗರಿಷ್ಠ ಶಿಕ್ಷೆ

- ಮತಾಂತರದ ಬಗ್ಗೆ ಪೊಲೀಸರಿಂದ ತನಿಖೆಗೆ ಅವಕಾಶ ನೀಡುವ ಸಾಧ್ಯತೆ

- ಕಾನೂನು ಉಲ್ಲಂಘಿಸಿದರೆ ಮತಾಂತರ ಮಾಡಿದ, ಮತಾಂತರ ಆದವರಿಗೂ ಶಿಕ್ಷೆ

ಕಾಯ್ದೆ ಜಾರಿಗೆ ಒಲವು:

ಮತಾಂತರ ನಿಷೇಧಿಸಬೇಕೆಂದು ವಿವಿಧ ಸಮಾಜದ ಮಠಾಧೀಶರು, ಸಂಘಟನೆಗಳು, ಅನೇಕ ಶಾಸಕರು ಒತ್ತಡ ಹೇರುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಅನೇಕ ಸದಸ್ಯರು ಸಹ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಈಗಾಗಲೇ ಹಲವಾರು ಬಾರಿ ಒಲವು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಧಾನಪರಿಷತ್ತಿನ ಆಡಳಿತಾರೂಢ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಮತಾಂತರ ನಿಷೇಧಕ್ಕೆ ಒತ್ತಾಯಿಸಿ ಖಾಸಗಿ ವಿಧೇಯಕ ಮಂಡಿಸಲು ಸಭಾಪತಿಗಳ ಅನುಮತಿ ಕೋರಿದ್ದಾರೆ.

ತಪ್ಪು ಮಾಡುವವರು ಹೆದರಬೇಕು: ಸಚಿವ

ಆಮಿಷ ಒಡ್ಡಿ ಮತಾಂತರ ಮಾಡುವುದು ಕಾನೂನುಬಾಹಿರ. ಇಂತಹ ಕೃತ್ಯ ಮಟ್ಟಹಾಕಲಾಗುವುದು. ಮತಾಂತರ ನಿಷೇಧಿಸುವ ಬಗ್ಗೆ ಯಾರೂ ಭಯಗೊಳ್ಳುವ ಅವಶ್ಯಕತೆ ಇಲ್ಲ. ಯಾರು ತಪ್ಪು ಮಾಡುತ್ತಾರೋ ಅವರು ಹೆದರಬೇಕು. ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Follow Us:
Download App:
  • android
  • ios