*ಒಗ್ಗಟ್ಟು ಮೂಡಿಸಲು ಮಧ್ಯಾಹ್ನ 3.30ಕ್ಕೆ ಸಭೆ ನಿಗದಿ*ಸಿದ್ದು, ಡಿಕೆಶಿ ಸೇರಿ 15 ನಾಯಕರ ದಂಡು ದಿಲ್ಲಿಗೆ*ದಿಲ್ಲಿಯ ತುಘಲಕ್‌ ಲೇನ್‌ನಲ್ಲಿರುವ ರಾಹುಲ್‌ ನಿವಾಸದಲ್ಲಿ ಸಭೆ

ಬೆಂಗಳೂರು (ಫೆ. 24): ಕಾಂಗ್ರೆಸ್‌ ರಾಜ್ಯ ನಾಯಕರ ನಡುವಿನ ಒಳ ಬೇಗುದಿ ಪರಿಹರಿಸಲು ವರಿಷ್ಠ ರಾಹುಲ್‌ ಗಾಂಧಿ (Rahul Gandhi) ಅವರೊಂದಿಗಿನ ಸಭೆ ಗುರುವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಸೇರಿ ಸುಮಾರು 15 ಮಂದಿ ರಾಜ್ಯ ನಾಯಕರ ದಂಡು ಗುರುವಾರ ಬೆಳಗ್ಗೆ ದೆಹಲಿಗೆ ತೆರಳಲಿದೆ.ಮುಂಬರುವ ಚುನಾವಣೆ ದೃಷ್ಟಿಯಿಂದ ಒಗ್ಗೂಡಿ ಕೆಲಸ ಮಾಡುವಂತೆ ನೇರ ಸಂದೇಶ ನೀಡುವ ಉದ್ದೇಶದಿಂದ ಖುದ್ದು ಹೈಕಮಾಂಡ್‌ ಬುಲಾವ್‌ ಮೇರೆಗೆ ರಾಜ್ಯ ನಾಯಕರು ದೆಹಲಿಗೆ ತೆರಳಲಿದ್ದಾರೆ.

ಗುರುವಾರ ಮಧ್ಯಾಹ್ನ ರಾಹುಲ್‌ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ರಾಜ್ಯ ನಾಯಕರ ದಂಡಿನೊಂದಿಗೆ ಮಧ್ಯಾಹ್ನ 3.30ರಿಂದ ಸಭೆ ನಡೆಸಲಿದ್ದಾರೆ.

ವಾಸ್ತವವಾಗಿ ಈ ಸಭೆ ಫೆ. 25ರಂದು ನಡೆಯಬೇಕಿತ್ತು. ಅಂದೇ ದೆಹಲಿಗೆ ಬರುವಂತೆ ರಾಜ್ಯ ನಾಯಕರಿಗೆ ಬುಲಾವ್‌ ಕೂಡ ಬಂದಿತ್ತು. ಆದರೆ, ರಾಹುಲ್‌ ಗಾಂಧಿ ಅವರು ಫೆ.25ಕ್ಕೆ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಪ್ರದೇಶಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಈ ಸಭೆ ಒಂದು ದಿನ ಮೊದಲೇ ನಿಗದಿಯಾಗಿದೆ.

ಇದನ್ನೂ ಓದಿ:Harsha Murder Case: ಹರ್ಷ ಹತ್ಯೆ ಕೇಸಲ್ಲಿ ನನ್ನನ್ನೂ ಬಂಧಿಸಲಿ: ಡಿಕೆಶಿ

ದಿಲ್ಲಿಯ ತುಘಲಕ್‌ ಲೇನ್‌ನಲ್ಲಿರುವ ರಾಹುಲ್‌ ಗಾಂಧಿ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ್‌, ಸಲೀಂ ಅಹ್ಮದ್‌, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್‌, ಡಾ.ಜಿ. ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಎಂ.ಬಿ.ಪಾಟೀಲ್‌, ರೆಹಮಾನ್‌ ಖಾನ್‌, ಯು.ಟಿ.ಖಾದರ್‌, 4 ಮಂದಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿ ಒಟ್ಟು ಹದಿನೈದು ಮಂದಿ ಭಾಗಿಯಾಗಲಿದ್ದಾರೆ.

ಮೂಲಗಳ ಪ್ರಕಾರ ಈ ಸಭೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಸಂಘಟನೆಗೆ ಗಮನ ಕೊಡುವಂತೆ ರಾಹುಲ್‌ ಗಾಂಧಿ ಅವರು ಹಿರಿಯ ನಾಯಕರಿಗೆ ಕಿವಿ ಮಾತು ಹೇಳಲಿದ್ದಾರೆ. ಅಲ್ಲದೆ, ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ನಾಯಕರಿಗೂ ಹೊಣೆಗಾರಿಕೆ ವಹಿಸಿಕೊಡಲಿದ್ದಾರೆ.

ಯಾರ‍್ಯಾರು ಭಾಗಿ?

- ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ ಭಾಗಿ

- ಧ್ರುವನಾರಾಯಣ್‌, ಸಲೀಂ ಅಹ್ಮದ್‌, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್‌, ಜಿ.ಪರಮೇಶ್ವರ್‌ ಕೂಡ ಉಪಸ್ಥಿತಿ

- ದಿನೇಶ್‌ ಗುಂಡೂರಾವ್‌, ಎಂ.ಬಿ.ಪಾಟೀಲ್‌, ರೆಹಮಾನ್‌ ಖಾನ್‌, ಯು.ಟಿ.ಖಾದರ್‌ ಸೇರಿ ಒಟ್ಟು 15 ಜನರ ಜತೆ ಸಭೆ

ಇದನ್ನೂ ಓದಿ: Rahul Slams PM ನೆಹರು ದೇಶಸೇವೆಗೆ ಯಾರ ಪ್ರಮಾಣ ಪತ್ರ ಬೇಕಿಲ್ಲ: ರಾಹುಲ್‌ ತಿರುಗೇಟು!

ಬುಲಾವ್‌ ಏಕೆ?

- ಮೇಲ್ನೋಟಕ್ಕೆ ಎಲ್ಲ ಸರಿ ಇದ್ದಂತೆ ಕಂಡರೂ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇದೆ

- ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರ ಬೆಂಬಲಿಗರ ಮಧ್ಯೆ ಬಹಿರಂಗ ಭಿನ್ನಾಭಿಪ್ರಾಯವಿದೆ

- ಕಾರ್ಯಾಧ್ಯಕ್ಷರು, ರಾಜ್ಯ ಘಟಕದ ನಡುವೆಯೂ ಸಮರ್ಪಕ ಹೊಂದಾಣಿಕೆ ಕೊರತೆ ದೂರಿದೆ

- ನಾಯಕರ ಪ್ರತಿಷ್ಠೆಯ ಪೈಪೋಟಿಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಹೈಕಮಾಂಡ್‌ ಗ್ರಹಿಸಿದೆ

- ಎಲ್ಲ ನಾಯಕರನ್ನೂ ಕೂರಿಸಿ ಒಗ್ಗಟ್ಟಿನ ಮಂತ್ರ ಪಠಿಸಲು ಫೆ.25ರಂದು ದಿಲ್ಲಿಗೆ ಬರಲು ಬುಲಾವ್‌ ಕೊಟ್ಟಿದೆ

ಚುನಾವಣೆ ಸಿದ್ಧತೆ ಚರ್ಚೆ?

- ಚುನಾವಣೆ ಸಿದ್ಧತೆ, ರೂಪರೇಷೆ ಬಗ್ಗೆಯೂ ಹೈಕಮಾಂಡ್‌ ಪ್ರಸ್ತಾಪಿಸುವ ಸಾಧ್ಯತೆ ಇದೆ

- ಚುನಾವಣೆ ದೃಷ್ಟಿಯಿಂದ ನಾಯಕರಿಗೆ ನಿರ್ದಿಷ್ಟಜವಾಬ್ದಾರಿ ವಹಿಸುವ ಸಂಭವ ಇದೆ

- ನೆನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ನೇಮಕ ಕುರಿತು ನಿರ್ಧಾರ ಪ್ರಕಟ ನಿರೀಕ್ಷೆ ಇದೆ