ಅಮೆರಿಕಾದ ಪಪ್ಪುವಾದಲ್ಲಿ ನಡೆದ ಜ್ವಾಲಾಮುಖಿ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವೂ ಆ ಪ್ರದೇಶದ ಜನರಿಗೆ ಪುನರ್ವಸತಿಗಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಭಾರತ ಸರ್ಕಾರದ ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದ ಪಪುವಾ ನ್ಯೂ ಜಿನಿವಾದ ಮೌಂಟ್ ಉಲ್ವಾನ್ ಬಳಿ ದೊಡ್ಡ ಪ್ರಮಾಣದ ಜ್ವಾಲಾಮುಖಿ ಸ್ಫೋಟ ಸಂಭವಿಸಿದ ಪರಿಣಾಮ 26 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ನವಂಬರ್ 20 ರಂದು ನಡೆದ ಈ ಅನಾಹುತದ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ಆ ಪ್ರದೇಶದ ಜನರಿಗೆ ಪುನರ್ವಸತಿಗಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಭಾರತ ಸರ್ಕಾರದ ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಬೇರೆ ದೇಶದವರಿಗೆ ಸಹಾಯ ಮಾಡಿ ಬೇಡ ಎನ್ನುವುದಿಲ್ಲ, ಆದರೆ ನಮ್ಮ ರೈತರ ಬಗ್ಗೆ ನಿರ್ಲಕ್ಷ್ಯ ಏಕೆ ಪ್ರಧಾನಿಯವರೇ ಎಂದು ಪ್ರಶ್ನಿಸಿದ್ದಾರೆ. ಅವರ ಟ್ವಿಟ್ ಸಾರಾಂಶ ಇಲ್ಲಿದೆ.
ಪ್ರಧಾನಿಯವರಿಗೆ ಟ್ವಿಟ್ ಟ್ಯಾಗ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರು ಇತರ ದೇಶಗಳಿಗೆ ಮಾನವೀಯ ಸಹಾಯ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ, ಅವರು ಈ ನೆರವಿನ ಮೂಲಕ ಭಾರತದ ರಾಜತಾಂತ್ರಿಕತೆ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಇದು ಸ್ವಾತಂತ್ರ ಪೂರ್ವದಿಂದಲೂ ಬಂದಂತಹ ಹವ್ಯಾಸವಾಗಿದ್ದು, ಇದು ಅಂದಿನಿಂದ ಇಂದಿಗೂ ಮುಂದುವರೆದಿದೆ.
ಆದರೆ ನಮ್ಮ ಪ್ರಶ್ನೆ ಏನು ಎಂದರೆ, ಏಕೆ ಪ್ರಧಾನಿ ಮೋದಿ ಅವರು ಇದೇ ರೀತಿಯ ಅನುಕಂಪವನ್ನು ನಮ್ಮ ರೈತರ ಮೇಲೆ ತೋರಿಸುತ್ತಿಲ್ಲ ಎಂಬುದು, ಅವರು ಬರದಿಂದಾಗಿ ತಾವು ಬೆಳೆದ ಬೆಳೆಯನ್ನೆಲ್ಲಾ ಕಳೆದುಕೊಂಡಿದ್ದಾರೆ. ಪರಿಹಾರ ಕೋರಿ ನಾವು ಬರೆದ ಪತ್ರಕ್ಕೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಕನಿಷ್ಠ ಸ್ಪಂದನೆ ಪಡೆಯುವುದಕ್ಕೆ ಕನ್ನಡಿಗರು ಅರ್ಹರಲ್ಲವೇ? ಬರದ ಸಮಯದಲ್ಲಿ ಕೇಂದ್ರದ ಈ ಮೌನವೂ, ಎಲ್ಲಾ ರಾಜ್ಯಗಳು ಮತ್ತು ಆ ರಾಜ್ಯಗಳ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ರೀತಿಯ ಬಗ್ಗೆ ಚಿಂತೆ ಉಂಟು ಮಾಡುತ್ತಿದೆ.
ರಾಜ್ಯದ ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಇನ್ನೂ ಪೂರ್ವಭಾವಿ ಸಭೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯದ ವತಿಯಿಂದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಳೆ ಪರಿಹಾರ ಧನವನ್ನು ಮೊದಲ ಹಂತದಲ್ಲಿ ಅರ್ಹ ರೈತರಿಗೆ ತಲಾ 2,000 ರೂ.ನಂತೆ ನೀಡಲಾಗುವುದು ಈ ನಡುವೆ ರಾಜ್ಯದ ಮೂವರು ಮಂತ್ರಿಗಳು ಪರಿಹಾರ ನೀಡುವಂತೆ ಕೇಳಿ ದೆಹಲಿಗೆ ಹೋದರೂ ಯಾವುದೇ ಧನಾತ್ಮಕ ಸ್ಪಂದನೆ ಸಿಕ್ಕಿಲ್ಲ. ಬರ ಪರಿಹಾರಕ್ಕಾಗಿ 18,171 ರೂಪಾಯಿ ಹಣಕಾಸು ಧನಸಹಾಯ ನೀಡಬೇಕು ಎಂದು ಕೇಂದ್ರಕ್ಕೆ ಪತ್ರವನ್ನು ಬರೆಯಲಾಗಿತ್ತು. ಕೇಂದ್ರವು ಕನಿಷ್ಠ ನಮ್ಮ ಪಾಲಿನ ತೆರಿಗೆ ಹಣವನ್ನು ಹಿಂದಿರುಗಿಸಿದರೂ ಅದು ನಮ್ಮ ರೈತರ ಸಂಕಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ರಾಜ್ಯದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ರೂ. 4,663 ಕೋಟಿ ನೀಡುವಂತೆ ಕೇಳಿದೆವು ಇದರ ಜೊತೆಗೆ ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ ಮತ್ತು ವಸತಿ ಸಚಿವರನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡುವಂತೆಯೂ ಪತ್ರ ಬರೆದಿದ್ದೆ ಆದರೆ ಅವರು ನಮಗೆ ಇನ್ನೂ ಕಾಲಾವಕಾಶ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದು, ಕೇಂದ್ರದ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
