* ಶುಕ್ರವಾರ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಹಿಂಸಾಚಾರ* ಕಾನ್ಪುರ ಹಿಂಸಾಚಾರದಲ್ಲಿ ಪಿಎಫ್‌ಐ ಕೈವಾಡಕ್ಕೆ ಸಾಕ್ಷ್ಯ* ಮುಖ್ಯ ಆರೋಪಿ ಹಶ್ಮಿ ಮನೆಯಲ್ಲಿ ಎಸ್‌ಡಿಪಿಐ, ಪಿಎಫ್‌ಐ ದಾಖಲೆ ಪತ್ತೆ* ಕಾನ್ಪುರ ಪೊಲೀಸ್‌ ಆಯುಕ್ತರ ಹೇಳಿಕೆ

ಕಾನ್ಪುರ(ಜೂ.06): ಕಳೆದ ಶುಕ್ರವಾರ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಅದರ ರಾಜಕೀಯ ಮುಖವಾಣಿಯಾದ ಎಸ್‌ಡಿಪಿಐನ ಪಾತ್ರ ಇರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಕಾನ್ಪುರದಲ್ಲಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಆದರೆ ಈಗ ಕೃತ್ಯದ ಹಿಂದೆ ಪಿಎಫ್‌ಐ ಪಾತ್ರ ಕಂಡುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಕಾನ್ಪುರ ಪೊಲೀಸ್‌ ಆಯುಕ್ತರು, ‘ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿ ಹಯಾತ್‌ ಝಫರ್‌ ಹಶ್ಮಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ, ಅಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐಗೆ ಸಂಬಂಧಿಸಿದ ಕೆಲ ದಾಖಲೆ ಪತ್ರಗಳು ಪತ್ತೆಯಾಗಿವೆ. ಈ ಕುರಿತು ಇನ್ನಷ್ಟುತನಿಖೆ ನಡೆಸಲಾಗುವುದು. ಹಶ್ಮಿ, ಮೌಲಾನಾ ಮೊಹಮ್ಮದ್‌ ಜೌಹರ್‌ ಅಲಿ ಫ್ಯಾನ್ಸ್‌ ಅಸೋಸಿಯೇಷನ್‌ ಎಂಬ ಸಂಘಟನೆ ರಾಷ್ಟ್ರೀಯ ಅಧ್ಯಕ್ಷನಾಗಿದ್ದು, ಕಳೆದ ಶುಕ್ರವಾರ ಅಂಗಡಿ ಮುಂಗಟ್ಟು ಮುಚ್ಚಲು ಕರೆಕೊಟ್ಟಿದ್ದ. ಪ್ರವಾದಿ ಮೊಹಮ್ಮದ್‌ರ ವಿರುದ್ಧ ಮಾಡಲಾದ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಶ್ಮಿ ಕರೆಕೊಟ್ಟಿದ್ದ ಬಂದ್‌ ಹಿಂಸಾಚಾರಕ್ಕೆ ಕಾರಣವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಹಶ್ಮಿ ಪ್ರಚೋದನೆಯಿಂದಾಗಿಯೇ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ಆರಂಭವಾಗಿ 39 ಜನರಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಇದುವರೆಗೂ 29 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾನ್ಪುರ ಗಲಭೆಕೋರರ ಆಸ್ತಿಗೆ ಬುಲ್ಡೋಜರ್‌ ಟ್ರೀಟ್ಮೆಂಟ್‌

ಪ್ರವಾದಿ ಮೊಹಮ್ಮದ್‌ರನ್ನು ನಿಂದಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಲಭೆ ನಡೆಸಿದವರ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್‌ ಹರಿಸಿ ನೆಲಸಮಗೊಳಿಸಲು ಸರ್ಕಾರ ನಿರ್ಧರಿಸಿದೆ. ಗಲಭೆ ಸಂಬಂಧ ಶನಿವಾರ 18 ಮಂದಿಯನ್ನು ಬಂಧಿಸಲಾಗಿದ್ದು, 500 ಜನರ ಮೇಲೆ ಕೇಸು ದಾಖಲಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ ಸ್ಥಳದಲ್ಲಿ ಶಾಂತಿ ನೆಲೆಸುವಂತೆ ಮಾಡಲಾಗಿದೆ.

ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಟೀವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರದ ನಮಾಜ್‌ ನಂತರ ಒಂದು ಗುಂಪಿನವರು ಕಾನ್ಪುರದ ಪರೇಡ್‌, ನಯಿ ಸಡಕ್‌ ಹಾಗೂ ಯತೀಮ್‌ಖಾನಾ ಪ್ರದೇಶಗಳಲ್ಲಿ ಪೊಲೀಸ್‌ ಠಾಣೆಗಳ ಮೇಲೆ ಬಾಂಬ್‌ ಎಸೆದು, ಕಲ್ಲು ತೂರಾಟ ನಡೆಸಿ, ಸುತ್ತಮುತ್ತಲಿನ ಅಂಗಡಿಗಳ ಮೇಲೂ ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

‘ಶನಿವಾರ ವಿಡಿಯೋ ದೃಶ್ಯಗಳ ಆಧಾರದ ಮೇಲೆ ಗಲಭೆಕೋರರನ್ನು ಬಂಧಿಸಿ, ಇನ್ನಷ್ಟುಜನರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಾಗಿದೆ. ಬೀದಿಗಿಳಿದು ದಾಂಧಲೆ ನಡೆಸುವವರ ಆಸ್ತಿ ಜಪ್ತಿ ಮಾಡುವ ಅಥವಾ ಸದರಿ ಪ್ರದೇಶದ ಅಕ್ರಮ ಮನೆಗಳನ್ನು ಬುಲ್ಡೋಜರ್‌ ಹರಿಸಿ ನೆಲಸಮಗೊಳಿಸುವ ಕಠಿಣ ಕ್ರಮವನ್ನೇ ಇವರ ಮೇಲೂ ಪ್ರಯೋಗಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.