ಕಾನ್ಪುರ(ಡಿ.29): ಅಂಚೆ ಇಲಾಖೆಯು ತನ್ನ ಸೇವೆಯನ್ನು ಜನಪ್ರಿಯಗೊಳಿಸಲು ಜಾರಿಗೊಳಿಸಿರುವ ‘ಮೈ ಸ್ಟಾಂಪ್‌’ ಯೋಜನೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ದುರುಪಯೋಗಗೊಂಡಿದ್ದು, ಅಂಚೆ ಚೀಟಿಯಲ್ಲಿ ಭೂಗತ ಪಾತಕಿ ಚೋಟಾ ರಾಜನ್‌ ಮತ್ತು ಗ್ಯಾಂಗ್‌ಸ್ಟರ್‌ ಮುನ್ನಾ ಭಜರಂಗಿ ಭಾವಚಿತ್ರವನ್ನು ಮುದ್ರಿಸಲಾಗಿದೆ.

ಪ್ರಕರಣ ಸಂಬಂಧ ಕಾನ್ಪುರ ಅಂಚೆ ಇಲಾಖೆ ತನಿಖೆ ಆರಂಭಿಸಿದೆ. ಯಾವುದೇ ವ್ಯಕ್ತಿ ತನ್ನ ಫೋಟೋ, ಸಂಸ್ಥೆಯ ಲೋಗೋ, ಆರ್ಟ್‌ ವರ್ಕ್, ಪಾರಂಪರಿಕ ಕಟ್ಟಡ, ಪ್ರಖ್ಯಾತ ಪ್ರವಾಸಿ ತಾಣ, ಐತಿಹಾಸಿಕ ನಗರಗಳು, ವನ್ಯಜೀವಿಗಳು ಮತ್ತಿತರ ಫೋಟೋಗಳನ್ನು ನೀಡಿ ಸ್ಟಾಂಪ್‌ ಪಡೆಯಬಹುದು.

ಆದರೆ ಸ್ಟಾಂಪ್‌ಗಳ ಮುದ್ರಣಕ್ಕೆ ಅನುಮತಿ ನೀಡುವ ಮುನ್ನ ಗುರುತಿನ ಚೀಟಿಯ ಪರಿಶೀಲನೆ ಕಡ್ಡಾಯ. ಈ ಹಂತದಲ್ಲಿ ಎಡವಟ್ಟು ಆಗಿರುವ ಕಾರಣ, ಭೂಗತ ಪಾತಕಿಗಳ ಫೋಟೋ ಅಂಚೆ ಚೀಟಿಯಲ್ಲಿ ಮುದ್ರಣಗೊಂಡಿದೆ.