ಜೀವಾವಧಿ ಶಿಕ್ಷೆ ಅನುಭವಿಸಿದವ ಈಗ ಎಂಬಿಬಿಎಸ್‌ ಪದವೀಧರ!| ಮಹಿಳೆ ಜತೆ ಸೇರಿ ಪತ್ನಿಯನ್ನೇ ಕೊಲೆಗೈದಿದ್ದ

ಕಲಬುರಗಿ[ಫೆ.16]: ಇಲ್ಲಿನ ಮಹಾದೇವಪ್ಪ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿ ಶನಿವಾರ ರಾತ್ರಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಎಲ್ಲರ ಚಿತ್ತ ಜೀವಾವಧಿ ಶಿಕ್ಷೆ ಅನುಭವಿಸಿ ಹೊರಬಂದ ಸುಭಾಷ ಪಾಟೀಲರತ್ತ ನೆಟ್ಟಿತ್ತು.

ಈತ ಬೆಂಗಳೂರಿನ ಕಾಲೇಜೊಂದರಲ್ಲಿ ವೈದ್ಯ ವಿದ್ಯಾರ್ಥಿಯಾಗಿದ್ದಾಗಲೇ ‘ಪರಸಂಗ’ಕ್ಕೆ ಮನಸೋತು ಗೃಹಿಣಿಯಾಗಿದ್ದ ಮಹಿಳೆ ಜತೆ ಸೇರಿ ಆಕೆಯ ಪತಿಯನ್ನೇ ಕೊಂದಿದ್ದ. ಜೀವಾವಧಿ ಶಿಕ್ಷೆಗೊಳಗಾಗಿ 2002ರಲ್ಲಿ ಜೈಲುಪಾಲಾಗಿದ್ದ. ಸುದೀರ್ಘ 14 ವರ್ಷ ಜೈಲುವಾಸ ಅನುಭವಿಸಿ ನಂತರ ತನ್ನ ಉಳಿದ ವೈದ್ಯ ಪದವಿ ಓದನ್ನು ಯಶಸ್ವಿಯಾಗಿ ಪೂರೈಸಿ ಇದೀಗ ಎಂಬಿಬಿಎಸ್‌ ಪದವೀಧರನಾಗಿದ್ದಾನೆ.

ಜೈಲಿನಿಂದ ಹೊರ ಬಂದ ನಂತರ ಸುಭಾಷ ಪಾಟೀಲ್‌ ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಸಂಪರ್ಕಿಸಿ ತಮ್ಮ ಉಳಿದ ಅವಧಿಯ ವೈದ್ಯಕೀಯ ಪದವಿ ಪೂರೈಸುವುದಾಗಿ ಹೇಳುತ್ತ ಅಧ್ಯಯನ ಮುಂದುವರಿಸಲು ಅನುಮತಿ ಕೋರಿದ್ದರು. ಅನುಮತಿ ದೊರಕಿದ ನಂತರ ಸುಭಾಷ ಪಾಟೀಲ್‌ ಕಲಬುರಗಿ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿಯೇ ಪ್ರವೇಶ ಪಡೆದು ಎಬಿಬಿಎಸ್‌ 3ನೇ ಮತ್ತು 4ನೇ ವರ್ಷದ ಅಧ್ಯಯನ 2019 ರ ಫೆಬ್ರುವರಿಯಲ್ಲಿ ಪೂರೈಸಿ ನಂತರ 1 ವರ್ಷ ಬಸವೇಶ್ವರ ಆಸ್ಪತ್ರೆಯಲ್ಲಿಯೇ ಹೌಸಮನ್‌ಶಿಪ್‌ ಸಹ ಪೂರೈಸಿದವರು.