* ಬಿಜೆಪಿ ಮುಖಂಡನ ಹೇಳಿಕೆಗೆ ವಿಪಕ್ಷಗಳು ಕೆಂಡಾಮಂಡಲ* ಬಿಜೆಪಿ ಕಚೇರಿ ಸೆಕ್ಯೂರಿಟಿ ಗಾರ್ಡ್ ನೇಮಕದಲ್ಲಿ ಅಗ್ನಿವೀರರಿಗೆ ಆದ್ಯತೆ: ಕೈಲಾಶ್* ಈ ಹೇಳಿಕೆಗೆ ಶಿವಸೇನೆ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಹಾಗೂ ಕಾಂಗ್ರೆಸ್ ವಿರೋಧ
ಇಂಧೋರ್(ಜೂ.20): ಅಗ್ನಿಪಥ ಯೋಜನೆಯಲ್ಲಿ ಆಯ್ಕೆಯಾಗಿ 4 ವರ್ಷ ಅವಧಿ ಪೂರೈಸಿ ಸೇವೆಯಿಂದ ನಿರ್ಗಮಿಸುವ ಅಗ್ನಿವೀರರಿಗೆ ಬಿಜೆಪಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಆಗಲು ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಗ್ನಿವೀರರು ಶಿಸ್ತು ಹಾಗೂ ವಿಧೇಯತೆಯನ್ನು ಬೆಳೆಸಿಕೊಂಡಿರುತ್ತಾರೆ. ಬಿಜೆಪಿ ಕಚೇರಿಯಲ್ಲಿ ವೃತ್ತಿಪರ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳಬೇಕು ಎಂದರೆ ಅಗ್ನಿವೀರ ಯೋಧರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದರು.
ಅವರ ಈ ಹೇಳಿಕೆಗೆ ಶಿವಸೇನೆ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಹಾಗೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ‘ಸೇನಾಪಡೆಗಳಿಗೆ ಅವಮಾನ ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಮುಖಂಡ ವರುಣ್ ಗಾಂಧಿ ಕೂಡ ಆಕ್ಷೇಪಿಸಿದ್ದಾರೆ. ಆದರೆ ‘ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ’ ಎಂದು ವಿಜಯವರ್ಗೀಯ ಸಮಜಾಯಿಷಿ ನೀಡಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ, ‘ನಿರ್ಗಮಿತ ಅಗ್ನಿವೀರರಿಗೆ ಚಾಲಕ, ಎಲೆಕ್ಟ್ರೀಶಿಯನ್, ಕ್ಷೌರಿಕ ಹಾಗೂ ಇತರ ವೃತ್ತಿಗಳ ತರಬೇತಿ ನೀಡಲಾಗುವುದು’ ಎಂದಿದ್ದರು ಎನ್ನಲಾಗಿತ್ತು. ಅವರ ಈ ಹೇಳಿಕೆಗೆ ವಿಪಕ್ಷಗಳು ತೀವ್ರವಾಗಿ ಕಿಡಿಕಾರಿದ್ದವು.
ಮಾಜಿ ಅಗ್ನಿವೀರರಿಗೆ ಸೆಕ್ಯುರಿಟಿ ಗಾರ್ಡ್ ಕೆಲಸ: ಡಿಕೆಶಿ ಆಕ್ರೋಶ
ಬಿಜೆಪಿ ಶಾಸಕರು ಹಾಗೂ ಸಚಿವರು ತಮ್ಮ ಮಕ್ಕಳನ್ನು ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್ ಯೋಜನೆ ದೇಶಭಕ್ತ ಸೈನಿಕರನ್ನು ನಾಲ್ಕು ವರ್ಷದ ಬಳಿಕ ಬೀದಿಗೆ ತಳ್ಳಲಿದೆ ಎಂದರು.
ಬಿಜೆಪಿ ನಾಯಕರೊಬ್ಬರು ಅಗ್ನಿಪಥ್ ಯೋಜನೆ ಕುರಿತು ಮಾತನಾಡುತ್ತಾ 4 ವರ್ಷದ ಬಳಿಕ ಸೆಕ್ಯೂರಿಟಿ ಗಾರ್ಡ್, ಫೈರ್ ಫೋರ್ಸ್‌ನಲ್ಲಿ ಕೆಲಸ ಆಗುತ್ತದೆ ಎಂದಿದ್ದಾರೆ. 17 ವರ್ಷಕ್ಕೆ ಯುವಕರನ್ನು ಸೇನೆಗೆ ಆಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಇದು ಸೈನಿಕರಿಗೆ ಮಾಡುವ ಅಪಮಾನವಲ್ಲವೇ? ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಸಚಿವರು, ಶಾಸಕರು ತಮ್ಮ ಮಕ್ಕಳನ್ನು ಇದಕ್ಕೆ ಸೇರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಮೊದಲು ಬಿಜೆಪಿ ಶಾಸಕರ ಶಾಸಕರ ಮಕ್ಕಳನ್ನು ಕಳುಹಿಸಿ. ನಿಮ್ಮ ಮಕ್ಕಳು ಮಾತ್ರ ಡಾಕ್ಟರ್, ಎಂಜಿನಿಯರ್, ಪೊ›ಫೆಸರ್‌ಗಳಾಗಬೇಕು. ಬೇರೆ ಬಡವರ ಮಕ್ಕಳು ಗಾರ್ಡ್ ಕೆಲಸ ಮಾಡಬೇಕಾ? ಇದಕ್ಕೆ ನಮ್ಮ ವಿರೋಧವಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಇದೀಗ ಯುವಕರ ಶೋಷಣೆಗೆ ಮುಂದಾಗಿದ್ದೀರಿ ಎಂದು ಕಿಡಿ ಕಾರಿದರು.
