ಜೋಧಪುರ[ಡಿ.08]: ‘ನ್ಯಾಯವನ್ನು ಒಂದೇ ಗಳಿಗೆಯಲ್ಲಿ ಯಾವತ್ತೂ ನೀಡಲಾಗದು. ನ್ಯಾಯವನ್ನು ಸೇಡಿನ ಅಸ್ತ್ರ ಎಂದು ಪರಿಗಣಿಸಿದರೆ ಅದು ತನ್ನ ಚಾರಿತ್ರ್ಯವನ್ನು ಕಳೆದುಕೊಳ್ಳುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ| ಶರದ್‌ ಬೋಬ್ಡೆ ಹೇಳಿದ್ದಾರೆ.

ಇಲ್ಲಿ ಶನಿವಾರ ನಡೆದ ರಾಜಸ್ಥಾನ ಹೈಕೋರ್ಟ್‌ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದರು. ತೆಲಂಗಾಣದಲ್ಲಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಬೋಬ್ಡೆ ಅವರು ಈ ಹೇಳಿಕೆ ನೀಡಿರುವುದಕ್ಕೆ ಮಹತ್ವ ಬಂದಿದೆ.

ಆದರೆ ತಾವು ಯಾವುದೇ ನಿರ್ದಿಷ್ಟಪ್ರಕರಣವನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳುತ್ತಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಕೂಡ ಹಾಜರಿದ್ದರು.

ಆದರೆ, ‘ಆದರೆ ನ್ಯಾಯದಾನ ವಿಳಂಬವಾದರೆ ಅದು ಕಕ್ಷಿದಾರರಿಗೆ ಆಗುವ ಅಡ್ಡಿ ಎಂದು ಹೇಳಲಾಗುತ್ತದೆ. ಇಂದು ನ್ಯಾಯಾಂಗದ ಬಗ್ಗೆ ಜನರ ಗ್ರಹಿಕೆ ಬೇರೆಯಾಗುತ್ತಿದೆ ಎಂಬುದನ್ನು ನಾವು ಅರಿತಿರಬೇಕು. ದಾವೆಯೊಂದರ ಇತ್ಯರ್ಥಕ್ಕೆ ತೆಗೆದುಕೊಳ್ಳುವ ಸುದೀರ್ಘ ಸಮಯವು ದೊಡ್ಡ ಅಡ್ಡಿಯಾಗಿದೆ’ ಎಂದು ವಿಚಾರಣೆಗಳ ವಿಳಂಬದ ಬಗ್ಗೆ ಒಪ್ಪಿಕೊಂಡರು.

‘ಆದಾಗ್ಯೂ ನ್ಯಾಯವನ್ನು ಒಂದೇ ಗಳಿಗೆಯ್ಲಲಿ ನಿಡಲಾಗದು. ಸೇಡಿನ ಅಸ್ತ್ರವನ್ನಾಗಿ ನ್ಯಾಯದಾನವನ್ನು ಬಳಸಲಾಗದು’ ಎಂದು ಅವರು ನುಡಿದರು.

‘ಒಂದು ಸಂಸ್ಥೆಯಾಗಿ ನಾವು (ನ್ಯಾಯಾಲಯಗಳು), ಜನರಿಗೆ ನ್ಯಾಯ ಕೈಗೆಟಕಬೇಕು ಎಂಬುದಕ್ಕೆ ಬದ್ಧರಾಗಿರಬೇಕು. ಹೊಸ ವಿಧಾನಗಳ ಮೂಲಕ ಕೈಗೆಟಕುವ, ತ್ವರಿತ ಹಾಗೂ ಸಮಾಧಾನ ತರುವಂತಹ ತೀರ್ಪುಗಳನ್ನು ನೀಡಬೇಕು’ ಎಂದರು.