ಸುಪ್ರೀಂ ಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನವೆಂಬರ್ 8 ರಂದು ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಡಿವೈ ಚಂದ್ರಚೂಡ್ ನೇಮಕಗೊಂಡಿದ್ದಾರೆ. 

ನವೆದೆಹಲಿ(ಅ.17): ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಡಿವೈ ಚಂದ್ರಚೂಡ್ ನೇಮಕಗೊಂಡಿದ್ದಾರೆ. ಜಸ್ಟೀಸ್ ಡಿವೈ ಚಂದ್ರಚೂಡ್ ಅವರನ್ನು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಭಾರತದ ಸಂವಿಧಾನದ 124ನೇ ವಿಧಿಯ ಷರತ್ತು 2 ರ ಅನ್ವಯ ನವೆಂಬರ್ ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಡಾ. ಧನಂಜಯ್ ಯಶವಂತ್ ಚಂದ್ರಚೂಡ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸುಪ್ರೀಂಕೋರ್ಚ್‌ನ ಹಿರಿಯ ನ್ಯಾಯಮೂರ್ತಿ ಧನಂಜಯ್‌ ವೈ.ಚಂದ್ರಚೂಡ್‌ ಅವರನ್ನು ಸರ್ವೋಚ್ಛ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಹಾಲಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಶಿಫಾರಸು ಮಾಡಿದ್ದರು. ಈ ಮೂಲಕ ಚಂದ್ರಚೂಡ್‌ ನೇಮಕದ ಕುರಿತು ಎದ್ದಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.

ಹೈಕೋರ್ಟ್‌, ಸುಪ್ರೀಂ ತೀರ್ಪು ಎಲ್ಲಾ ಭಾಷೆಗಳಲ್ಲೂ ಇರಲಿ: ಪ್ರಧಾನಿ ಮೋದಿ

ಯು.ಯು.ಲಲಿತ್‌ ಅವರು ನ.8ರಂದು ನಿವೃತ್ತಿಯಾಗಲಿದ್ದಾರೆ. ಡಿ.ವೈ.ಚಂದ್ರಚೂಡ್‌ ಅವರು ನ.9ರಂದು ಸುಪ್ರೀಂಕೋರ್ಚ್‌ನ 50ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಈ ಹುದ್ದೆಯಲ್ಲಿ 2024ರ ನ.10ರವರೆಗೆ ಅಂದರೆ 2 ವರ್ಷ ಇರಲಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಕಾನೂನು ಸಚಿವಾಲಯವು, ಮುಂದಿನ ಸಿಜೆಐ ಹೆಸರನ್ನು ಶಿಫಾರಸು ಮಾಡುವಂತೆ ಯು.ಯು.ಲಲಿತ್‌ ಅವರಿಗೆ ಸಂದೇಶ ರವಾನಿಸಿತ್ತು. ಆದರೆ ಇದೇ ವೇಳೆ, ‘ಡಿ.ವೈ.ಚಂದ್ರಚೂಡ್‌ ಅವರು ಬಾಂಬೆ ಹೈಕೋರ್ಚ್‌ನ ನ್ಯಾಯಾಧೀಶರಾಗಿದ್ದ ವೇಳೆ ಅವರ ಪುತ್ರ ವಕೀಲಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ ಅವರ ಪರವಾಗಿ ತೀರ್ಪು ನೀಡುವ ಮೂಲಕ ಲೋಪ ಎಸಗಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಯು.ಯು.ಲಲಿತ್‌ಗೆ ಪತ್ರ ಬರೆದಿದ್ದರು. ಹೀಗಾಗಿ ಸಿಜೆಐ ಹುದ್ದೆಗೆ ಅವರ ಹೆಸರು ಶಿಫಾರಸು ವಿಳಂಬವಾಗಬಹುದು ಎಂದೆಣಿಸಲಾಗಿತ್ತು.

ವಿಶೇಷವೆಂದರೆ ಡಿ.ವೈ.ಚಂದ್ರಚೂಡ್‌ ಅವರ ತಂದೆ ಕೂಡಾ ಸುಪ್ರೀಂಕೋರ್ಚ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಅಲ್ಲದೆ 1978ರಿಂದ 1985ರವರೆಗೆ ಈ ಹುದ್ದೆಯಲ್ಲಿ ಮುಂದುವರೆಯುವ ಮೂಲಕ ಸುದೀರ್ಘ ಅವಧಿಗೆ ಈ ಹುದ್ದೆಯಲ್ಲಿ ವ್ಯಕ್ತಿ ಎಂಬ ಹಿರಿಮೆಯನ್ನು ಈಗಲೂ ಹೊಂದಿದ್ದಾರೆ. ಡಿ.ವೈ.ಚಂದ್ರಚೂಡ್‌ ಅವರ ಪುತ್ರ ಬಾಂಬೆ ಹೈಕೋರ್ಚ್‌ನಲ್ಲಿ ವಕೀಲರಾಗಿದ್ದಾರೆ.

Bank Scams ಬಿಜೆಪಿ ನಾಯಕ ಸ್ವಾಮಿ ಅರ್ಜಿಗೆ ಕಂಗಾಲಾದ ಕೇಂದ್ರ ಸರ್ಕಾರ, ಸುಪ್ರೀಂ ನೋಟಿಸ್!

ಕೊಲಿಜಿಯಂ ಸೂಚಿಸಿದ ಹೆಸರು ಚಂದ್ರಚೂಡ್
ಇತ್ತೀಚೆಗೆ 11 ಹೈಕೋರ್ಚ್‌ ಜಡ್ಜ್‌ಗಳ ಹೆಸರು ಸುಪ್ರೀಂಕೋರ್ಚ್‌ಗೆ ನೇಮಕಗೊಳ್ಳಲು ಕೊಲಿಜಿಯಂ ಮುಂದೆ ಬಂದಿತ್ತು. ಅವರ ಬಗ್ಗೆ ಅಭಿಪ್ರಾಯ ಕೇಳಿ ಕೊಲಿಜಿಯಂ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿಗಳು ಇನ್ನಿತರ ನಾಲ್ವರು ಜಡ್ಜ್‌ಗಳಿಗೆ ಪತ್ರ ಬರೆದಿದ್ದರು. ‘ಹೀಗೆ ಪತ್ರ ಬರೆಯುವುದು ಸರಿಯಲ್ಲ, ಭೌತಿಕ ಸಭೆಯಲ್ಲಿ ಮಾತ್ರ ಚರ್ಚೆ ನಡೆಸಬೇಕು’ ಎಂದು ಇಬ್ಬರು ನ್ಯಾಯಮೂರ್ತಿಗಳು ಆಕ್ಷೇಪಿಸಿ ಮಾರುತ್ತರ ಬರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇನ್ನಿಬ್ಬರು ನ್ಯಾಯಮೂರ್ತಿಗಳು ಈ ನಡೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. 

ಯು.ಯು.ಲಲಿತ್‌ ಅವರು ಕೊಲಿಜಿಯಂ ಸದಸ್ಯರಾದ ಇನ್ನಿತರ ನಾಲ್ವರು ಜಡ್ಜ್‌ಗಳಿಗೆ ಹೊಸ ಜಡ್ಜ್‌ಗಳ ಆಯ್ಕೆ ಕುರಿತು ಅಭಿಪ್ರಾಯವನ್ನು ಪತ್ರಮುಖೇನ ಕೇಳಿರುವುದಕ್ಕೆ ಇತ್ತೀಚೆಗೆ ಇಬ್ಬರು ಸುಪ್ರೀಂಕೋರ್ಚ್‌ ಜಡ್ಜ್‌ಗಳು ಆಕ್ಷೇಪಿಸಿದ್ದರು. ಆ ಜಡ್ಜ್‌ಗಳು ನ್ಯಾ.ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾ.ಎಸ್‌.ಅಬ್ದುಲ್‌ ನಜೀರ್‌ ಎಂದು ಸ್ವತಃ ಕೊಲಿಜಿಯಂ ಬಹಿರಂಗಪಡಿಸಿದೆ. ಇದು ಭಾರತದ ನ್ಯಾಯಾಂಗದಲ್ಲಿ ಅಪರೂಪದ ಬೆಳವಣಿಗೆಯಾಗಿದೆ.