ಮುಂಬೈ (ಮಾ.01): ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಮನೆಯ ಬಳಿ ಇತ್ತೀಚೆಗೆ ಸ್ಫೋಟಕ ಇರಿಸಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಘಟನೆಯಲ್ಲಿ ತನ್ನ ಕೈವಾಡವಿದೆ ಎಂದು ಹೇಳಿಕೊಂಡಿರುವ ‘ಜೈಷ್‌ ಅಲ್‌ ಹಿಂದ್‌’ ಎಂಬ ಸಂಘಟನೆಯೊಂದು, ಈಗಿನದ್ದು ಕೇವಲ ಟ್ರೇಲರ್‌, ಮುಂದೆ ಇನ್ನೂ ದೊಡ್ಡ ಆಟ ಇದೆ ಎಂದು ಎಚ್ಚರಿಸಿದೆ. ಇದೇ ಸಂಘಟನೆ ಕಳೆದ ತಿಂಗಳು ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಸಮೀಪ ನಡೆದ ಲಘು ಸ್ಫೋಟವೊಂದರ ಹೊಣೆಯನ್ನೂ ಹೊತ್ತುಕೊಂಡಿತ್ತು.

ಈ ಕುರಿತು ಸಾಮಾಜಿಕ ಜಾಲತಾಣ ಟೆಲಿಗ್ರಾಮ್‌ನಲ್ಲಿ ಮುಕೇಶ್‌ ಅಂಬಾನಿ ಉದ್ದೇಶಿಸಿ ಹೇಳಿಕೆಯೊಂದನ್ನು ನೀಡಿರುವ ಸಂಘಟನೆ ‘ಆ್ಯಂಟಿಲಿಯಾದ ಮುಂದೆ ಬಾಂಬ್‌ ಇಟ್ಟನಮ್ಮ ಸೋದರ ಸುರಕ್ಷಿತವಾಗಿ ಮನೆಗೆ ಸೇರಿಕೊಂಡಿದ್ದಾನೆ. ಈಗಿನದ್ದು ಕೇವಲ ಟ್ರೇಲರ್‌, ದೊಡ್ಡ ಆಟ ಇನ್ನೂ ಬಾಕಿ ಇದೆ. ನಾವು ಪತ್ರದಲ್ಲಿ ತಿಳಿಸಿದಂತೆ ಕೂಡಲೇ ಬಿಟ್‌ಕಾಯಿನ್‌ ರೂಪದಲ್ಲಿ ನಮಗೆ ಹಣ ಪಾವತಿ ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ಬಾರಿ ನಾವು ಕಾರನ್ನು ನಿಮ್ಮ ಮಕ್ಕಳ ಕಾರಿಗೆ ಗುದ್ದಲಿದ್ದೇವೆ. ನೀವು (ಮುಕೇಶ್‌) ಏನು ಮಾಡಬೇಕೆಂಬುದು ನಿಮಗೆ ಗೊತ್ತಿದೆ. ನಾವು ಈಗಾಗಲೇ ಹೇಳಿದಂತೆ ಸುಮ್ಮನೆ ಹಣ ವರ್ಗಾವಣೆ ಮಾಡಿ’ ಎಂದು ಬೆದರಿಕೆ ದಾಟಿಯಲ್ಲಿ ಹೇಳಲಾಗಿದೆ.

ಇದು ಟ್ರೇಲರ್, ಬಾಂಬ್ ಇಟ್ಟು ಕೊಲ್ಲುತ್ತೇವೆ‌: ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ! .

ಇದೇ ವೇಳೆ ತನಿಖಾ ಸಂಸ್ಥೆಗಳನ್ನು ಉದ್ದೇಶಿಸಿಯೂ ಹೇಳಿಕೆ ನೀಡಿರುವ ಶಂಕಿತ ಉಗ್ರರು ‘ನಮ್ಮನ್ನು ತಡೆಯುವಂತೆ ನಾವು ನಿಮಗೆ ಸವಾಲು ಹಾಕುತ್ತೇವೆ. ದೆಹಲಿಯಲ್ಲಿ ನಾವು ನಿಮ್ಮ ಮೂಗಿನ ಕೆಳಗೆ ದಾಳಿ ನಡೆಸಿದರೂ ನೀವು ಏನೂ ಮಾಡಲಾಗಲಿಲ್ಲ. ನೀವು ಮೊಸಾದ್‌ (ಇಸ್ರೇಲ್‌ನ ಗುಪ್ತಚರ ಸಂಸ್ಥೆ) ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರೂ ದಯನೀಯವಾಗಿ ವಿಫಲರಾಗಿದ್ದೀರಿ. ಅಲ್ಲಾನ ಅನುಗ್ರಹದಿಂದ ನೀವು ಪದೇ ಪದೇ ಸೋಲಲಿದ್ದೀರಿ’ ಎಂದು ವ್ಯಂಗ್ಯವಾಡಲಾಗಿದೆ.

ಕಳೆದ ಗುರುವಾರ ಮುಕೇಶ್‌ ಅಂಬಾನಿ ಮನೆಯ ಸಮೀಪದಲ್ಲೇ 20 ಜಿಲೆಟಿನ್‌ ಕಡ್ಡಿಗಳನ್ನು ಇಡಲಾಗಿದ್ದ ಕಾರೊಂದು ಪತ್ತೆಯಾಗಿತ್ತು. ಕಳವಾಗಿದ್ದ ಕಾರನ್ನು ಈ ಕೃತ್ಯಕ್ಕೆ ಬಳಸಲಾಗಿತ್ತು. ಕಾರಿನೊಳಗೆ 20 ಜಿಲೆಟಿನ್‌ ಕಡ್ಡಿ, ಮುಕೇಶ್‌ ಅಂಬಾನಿ ಉದ್ದೇಶಿಸಿ ಬರೆದ ಒಂದು ಪತ್ರ ಮತ್ತು ಕಾರಿನ ಹಲವು ನಂಬರ್‌ ಪ್ಲೇಟ್‌ ಪತ್ತೆಯಾಗಿದ್ದವು.