ಕೊರೋನಾ ಶಮನಕ್ಕೆ ನಂಜನಗೂಡು ಲಸಿಕೆ?
ಕೊರೋನಾಗೆ ನಂಜನಗೂಡು ಲಸಿಕೆ?| ಜ್ಯುಬಿಲಂಟ್ ಕಂಪನಿಗೆ ಲಸಿಕೆ ತಯಾರಿ ಗುತ್ತಿಗೆ| ಇದೇ ಕಂಪನಿಯಿಂದ ಮೈಸೂರಿಗೆ ಹಬ್ಬಿತ್ತು ಸೋಂಕು!
ನವದೆಹಲಿ(ಮೇ.13): ಕೊರೋನಾ ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ಎಂದು ತುರ್ತು ಬಳಕೆಗೆ ಅಮೆರಿಕದಲ್ಲಿ ಅನುಮತಿ ಪಡೆದಿರುವ ರೆಮ್‌ಡೆಸಿವಿರ್ ಲಸಿಕೆ ಶೀಘ್ರದಲ್ಲೇ ಭಾರತದಲ್ಲೂ ಉತ್ಪಾದನೆಯಾಗಲಿದೆ. ವಿಶೇಷವೆಂದರೆ, ಈ ಲಸಿಕೆ ಉತ್ಪಾದನೆಯ ಗುತ್ತಿಗೆ ಪಡೆದಿರುವುದು, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲೂ ಘಟಕ ಹೊಂದಿರುವ ಜ್ಯುಬಿಲಂಟ್ ಲೈಫ್ ಸೈನ್ಸಸ್ ಕಂಪನಿ.
ಈ ಕಂಪನಿಯ ಸಿಬ್ಬಂದಿಗೆ ಇತ್ತೀಚೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆತನಿಂದ ಮೈಸೂರು, ಮಂಡ್ಯ ಜಿಲ್ಲೆಯ ಹಲವರಿಗೆ ಸೋಂಕು ಹರಡಿತ್ತು.
ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!
ಅಮೆರಿಕ ಗಿಲೀಡ್ ಕಂಪನಿಯ ರೆಮ್‌ಡೆಸಿವಿರ್ ಲಸಿಕೆ ಪಡೆದ ರೋಗಿಗಳಲ್ಲಿ ಚೇತರಿಕೆ ಪ್ರಮಾಣ ಅಮೆರಿಕದಲ್ಲಿ ಇತರೆ ಯಾವುದೇ ರೋಗಿಗಳಿಗಿಂತ ಹೆಚ್ಚು ವೇಗವಾಗಿದೆ. ಹೀಗಾಗಿ ಗಂಭೀರ ಸ್ವರೂಪದ ಕೊರೋನಾಕ್ಕೆ ತುತ್ತಾಗಿರುವ ರೋಗಿಗಳಿಗೆ ಇದನ್ನು ಬಳಸಲು ಅಮೆರಿಕ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿತ್ತು. ಅದೇ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಗುತ್ತಿಗೆಯನ್ನು ಪುಣೆ ಮೂಲದ ಜ್ಯುಬಿಲಂಟ್ ಲೈಫ್ ಸೈನ್ಸಸ್‌ನ ಅಂಗ ಸಂಸ್ಥೆಯಾದ ಜ್ಯುಬಿಲಂಟ್ ಜೆನೆರಿಕ್ಸ್ ಲಿ. ಪಡೆದುಕೊಂಡಿದೆ. ಒಪ್ಪಂದದ ಅನ್ವಯ ಜ್ಯುಲಿಯೆಂಟ್ ಜೆನೆರಿಕ್ಸ್ ಲಿ. ಲಸಿಕೆ ಉತ್ಪಾದನೆಯ ತಂತ್ರಜ್ಞಾನ ವರ್ಗಾವಣೆ, ಉತ್ಪಾದನೆ ಮತ್ತು ಮಾರಾಟದ ಹಕ್ಕನ್ನು ಪಡೆದುಕೊಳ್ಳಲಿದೆ.